ಮೈಸೂರು : ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಆಕ್ಸಿಜನ್ ಈಗ ಜೀವರಕ್ಷಕವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವ ರಕ್ಷಕದ ವ್ಯವಸ್ಥೆ ಹೇಗಿದೆ ಎಂಬುದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಚಾಮರಾಜನಗರ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಹಲವಾರು ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದು, ಇದರ ಬೆನ್ನಲ್ಲೇ ಈಗ ಮೈಸೂರು ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪೂರೈಕೆಯ ಬಗ್ಗೆ ಈಗ ಆತಂಕ ಶುರುವಾಗಿವೆ.
ಯಾಕೆಂದರೆ, ಮೈಸೂರು ನಗರದ ಸರ್ಕಾರಿ ಕೆ.ಆರ್.ಆಸ್ಪತ್ರೆ ಹಾಗೂ ಕೋವಿಡ್‌ಗಾಗಿ ವಿಶೇಷವಾಗಿ ನಿರ್ಮಿಸಿರುವ ಕೋವಿಡ್ ಟ್ರಾಮಾ ಸೆಂಟರ್‌ಗಳಲ್ಲಿ ಪ್ರತಿ ದಿನ ಸೋಂಕಿತರು ದಾಖಲಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ಸರಿಯಾಗಿ ಆಕ್ಸಿಜನ್ ಪೂರೈಕೆ ಆಗುತ್ತಿಲ್ಲ.
ಈ ಬಗ್ಗೆ ಕಳೆದ ವಾರ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ 2 ದಿನಗಳಿಗೆ ಸಾಕಾಗುವಷ್ಟು ಆಕ್ಸಿಜನ್ ಇದೆ. ಹೆಚ್ಚಿನ ಆಕ್ಸಿಜನ್ ಸಿಲೆಂಡರ್‌ಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಮಧ್ಯೆ ಚಾಮರಾಜನಗರದಲ್ಲಿ ಘಟನೆ ನಡೆದು ಹೋಗಿದೆ.
ಮೈಸೂರಿಗೆ ಎಲ್ಲಿಂದ ಆಕ್ಸಿಜನ್ ಸರಬರಾಜು : ಮೈಸೂರು ಜಿಲ್ಲೆಗೆ ಮುಖ್ಯವಾಗಿ ಪ್ರತಿದಿನ ಆಕ್ಸಿಜನ್ ಬಳ್ಳಾರಿಯಿಂದ ಸರಬರಾಜು ಆಗುತ್ತದೆ. ಜೊತೆಗೆ ನಗರದ ಹೆಬ್ಬಾಳದ ಕೈಗಾರಿಕಾ ಪ್ರದೇಶದಲ್ಲಿ ಒಂದು ಆಕ್ಸಿಜನ್ ಉತ್ಪಾದಕ ಘಟಕ ಇದ್ದು,ಈ ಘಟಕದ ಜೊತೆಗೆ ಇತರ ನಾಲ್ಕು ಘಟಗಳಿವೆ.
ಆಕ್ಸಿಜನ್ ಕಚ್ಚಾ ವಸ್ತುಗಳನ್ನು ಬೇರೆ ಕಡೆಯಿಂದ ತರೆಸಿಕೊಂಡು ಉತ್ಪಾದನೆ ಮಾಡುತ್ತಾರೆ. ಆದರೆ, ಈ ನಾಲ್ಕು ಆಕ್ಸಿಜನ್ ಉತ್ಪಾದನಾ ಘಟಕಗಳು ಕಚ್ಚಾ ವಸ್ತುಗಳ ಕೊರತೆಯಿಂದ ಉತ್ಪಾದನೆ ಸರಿಯಾಗಿ ಆಗುತ್ತಿಲ್ಲ.
ಮುಖ್ಯವಾಗಿ ಬಳ್ಳಾರಿಯಿಂದಲೇ ಪ್ರತಿದಿನ 16 ಟನ್ ಆಕ್ಸಿಜನ್ ಬರುತ್ತದೆ. ಅದರಲ್ಲಿ 8 ಟನ್ ಸರ್ಕಾರಿ ಆಸ್ಪತ್ರೆಗಳಿಗೆ ಇನ್ನೂ 8 ಟನ್ ಖಾಸಗಿ ಆಸ್ಪತ್ರೆಯವರಿಗೆ ನೀಡಲಾಗುತ್ತಿದೆ.
ಇದರ ಜೊತೆಗೆ ಮೈಸೂರು ಸರ್ಕಾರಿ ಆಸ್ಪತ್ರೆಗಳು ಹಾಗೂ ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳಿಗೆ ಮೈಸೂರಿನಿಂದ ಪ್ರತಿದಿನ ಆಕ್ಸಿಜನ್ ಪೂರೈಕೆ ಆಗುತ್ತಿದೆ. ಈಗ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು ಆಕ್ಸಿಜನ್‌ನ ಬೇಡಿಕೆ 3 ಪಟ್ಟು ಜಾಸ್ತಿಯಾಗಿದೆ.
ಮೈಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ವ್ಯವಸ್ಥೆ ಹೇಗಿದೆ : ಆಕ್ಸಿಜನ್‌ನ ಪೂರೈಕೆಯೇ ಸವಾಲಾಗಿದೆ. ಒಂದು ಗಂಟೆ ತಡದವಾದರು ಅಪಾಯ ಎದುರಿಸಬೇಕಾಗಿದೆ. ಪ್ರತಿ ದಿನ ಮೈಸೂರಿನ ಸರ್ಕಾರಿ ಕೆ.ಆರ್.ಆಸ್ಪತ್ರೆಯಲ್ಲಿ 13 ಕಿಲೋ ಲೀ.ಆಕ್ಸಿಜನ್ ಬೇಕು.
ಇಡೀ ಕೆ.ಆರ್.ಆಸ್ಪತ್ರೆಯ ಕೋವಿಡ್ ಸೆಂಟರ್‌ನಲ್ಲಿ 300 ಸೋಂಕಿತರು, ಕೆ.ಆರ್.ಆಸ್ಪತ್ರೆಯ ಕಲ್ ಬಿಲ್ಡಿಂಗ್‌ನಲ್ಲಿ200 ಮಂದಿ ಸೋಂಕಿತರು, ಟ್ರಾಮಾ ಸೆಂಟರ್‌ನಲ್ಲಿ 180 ಸೋಂಕಿತರು ಇದ್ದು, ಇದರ ಜೊತೆಗೆ ಇವೆರಡು ಕಡೆ 45 ಮಂದಿ ವೆಂಟಿಲೇಟರ್ನಲ್ಲಿ ಇದ್ದಾರೆ. ಸದ್ಯಕ್ಕೆ ಆಕ್ಸಿಜನ್ ಕೊರತೆ ಇಲ್ಲ.
ಪ್ರತಿದಿನ ಆಕ್ಸಿಜನ್ ಬರುತ್ತಿದೆ. ಇದರ ಸಂಗ್ರಹಣೆಗಾಗಿ ದೊಡ್ಡ ಟ್ಯಾಂಕ್ ನಿರ್ಮಿಸಲಾಗಿದೆ. ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ನಂಜರಾಜ್ ಮಾಹಿತಿ ನೀಡಿದರು.