ಮೈಸೂರು: ರಾಜ್ಯದ ಬಿಜೆಪಿ ಸರ್ಕಾರ ರಿಯಲ್ ಎಸ್ಟೇಟ್ ಏಜೆಂಟರುಗಳ ಲಾಬಿಗೆ ಮಣಿದಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಮೈಸೂರು ಪತ್ರಿಕಾ ಭವನದಲ್ಲಿ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಜಾಹೀರಾತು ಕೊಟ್ಟಿರುವುದೇ ಸರ್ಕಾರದ ಸಾಧನೆ. ಇದು ಖಾಲಿ ಡಬ್ಬದ ಸರ್ಕಾರ ಎಂದು ಟೀಕಿಸಿದರು.
ರಾಜ್ಯದಲ್ಲಿ ಪ್ರವಾಹ ಉಂಟಾದಾಗ ಹಾಗೂ ಸದ್ಯದ ಕೊರೊನಾ ತಡೆಗಟ್ಟುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸಂಕಷ್ಟದ ಸಮಯದಲ್ಲೂ ಕೊರೊನಾ ನಿಯಂತ್ರಿಸುವುದನ್ನು ಬಿಟ್ಟು, ಕೊರೊನಾ ಹೆಸರಿನಲ್ಲಿ ಹಣದ ಲೂಟಿ ನಡೆಯುತ್ತಿದೆ. ರಾಜ್ಯದಲ್ಲಿ ಕೊರೊನಾ ಸಂದರ್ಭದಲ್ಲಿ ರೈತ ವಿರೋಧಿ, ಜನ ವಿರೋಧಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಸರ್ಕಾರ ಜಾರಿಗೆ ತರಲು ಹೊರಟಿದೆ ಎಂದು ಅವರು ಆರೋಪಿಸಿದರು.
ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರಾಜ್ಯ ಸರ್ಕಾರ ರಿಯಲ್ ಎಸ್ಟೇಟ್ ಏಜೆಂಟರ ಲಾಬಿಗೆ ಮಣಿದಿದೆ. ಈ ಕಾಯ್ದೆಯಿಂದ ಶ್ರೀಮಂತರು ಜಮೀನನ್ನು ತೆಗೆದುಕೊಳ್ಳುವ ಮೂಲಕ ಮತ್ತೆ ಜಮೀನ್ದಾರಿ ಪದ್ಧತಿ ಬರಲಿದೆ. ಇದರ ವಿರುದ್ಧ ಕಾಂಗ್ರೆಸ್ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಕುಮಾರಸ್ವಾಮಿ ಟ್ವೀಟ್ ಬಗ್ಗೆ ಈಗ ಉತ್ತರ ನೀಡುವುದಿಲ್ಲ. ಇನ್ನೊಂದು ದಿನ ಉತ್ತರ ನೀಡುವೆ. ನಾನು ಹೆದರಿ ಹೋಗುವ ಪ್ರಶ್ನೆಯೇ ಇಲ್ಲ ಎಂದರು.