ಮೈಸೂರು: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಇಂದು ಬುಧವಾರ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದರು. ಸುತ್ತೂರು ಶ್ರೀಗಳ ಆಶೀರ್ವಾದ ಪಡೆದು ಮಠದಲ್ಲಿ ಮಧ್ಯಾಹ್ನದ ಪ್ರಸಾದ ಸೇವಿಸಿದರು.
ಮಠದ ವತಿಯಿಂದ ಸುತ್ತೂರು ಸ್ವಾಮೀಜಿ ಅಖಿಲೇಶ್ ಯಾದವ್ಗೆ ಮೈಸೂರು ಪೇಟ ಹಾಕಿ, ಶಾಲು ಹೊದಿಸಿ ಸನ್ಮಾನ ಮಾಡಿದರು. ಅಖಿಲೇಶ್ ಯಾದವ್ ತಮ್ಮ ಎಂಜಿನಿಯರಿಂಗ್ ವ್ಯಾಸಂಗವನ್ನು ಸುತ್ತೂರು ಮಠದ ಅಧೀನದಲ್ಲಿ ಇರುವ ಜೆಸಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಾಡಿದ್ದರು. ಅಂದಿನಿಂದಲೂ ಅಖಿಲೇಶ್ ಯಾದವ್ ಅವರು, ಮಠದ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ಅವರಿಗೆ ಮೈಸೂರಿನ ಬಗ್ಗೆ ವಿಶೇಷ ಆಸಕ್ತಿ ಇದೆ.
ಕಳೆದ ರಾತ್ರಿ ಮಡಿಕೇರಿಯಲ್ಲಿ ವಾಸ್ತವ್ಯ: ಅಖಿಲೇಶ್ ಯಾದವ್ ಅವರು, ಮಹಾಘಟಬಂಧನದ ಪ್ರತಿಪಕ್ಷಗಳ ಸಭೆಯಲ್ಲಿ ಭಾಗವಹಿಸಲು ಜುಲೈ 17 ರಂದು ಬೆಂಗಳೂರಿಗೆ ಆಗಮಿಸಿದ್ದರು. ಸಭೆ ಮುಗಿಸಿಕೊಂಡು ತಾವು ವಿದ್ಯಾಭ್ಯಾಸ ಮಾಡಿದ್ದ ಜೆಸಿ ಇಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಸಮಯದ ಅಭಾವದಿಂದ ಮಂಗಳವಾರ ಬೆಂಗಳೂರಿನಿಂದ ನೇರವಾಗಿ, ರಸ್ತೆಯ ಮೂಲಕ ಮಡಿಕೇರಿಗೆ ಬಂದು ರಾತ್ರಿ ವಾಸ್ತವ್ಯ ಹೂಡಿದ್ದರು. ಇಂದು ಮಧ್ಯಾಹ್ನ ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದರು. ಮಠದ ಶ್ರೀಗಳ ಆಶೀರ್ವಾದ ಪಡೆದು, ಮಧ್ಯಾಹ್ನ ಊಟ ಮಾಡಿದರು. ಬಳಿಕ ವಿಶೇಷ ವಿಮಾನದ ಮೂಲಕ ಮೈಸೂರು ವಿಮಾನ ನಿಲ್ದಾಣದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೊರಟರು. ಅಲ್ಲಿಂದ ನೇರವಾಗಿ ಉತ್ತರ ಪ್ರದೇಶದ ಲಕ್ನೋ ವಿಮಾನ ನಿಲ್ದಾಣಕ್ಕೆ ತೆರಳಿದರು.
ಈ ಹಿಂದೆ, ನಿಖಿಲ್- ಅಖಿಲೇಶ್ ಭೇಟಿ: ಜಾತ್ಯತೀತ ಜನತಾದಳ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಜುಲೈ 15 ರಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ವರಿಷ್ಠ ನಾಯಕ ಅಖಿಲೇಶ್ ಯಾದವ್ ಅವರನ್ನು ಲಖನೌದ ಅವರ ನಿವಾಸದಲ್ಲಿ ಭೇಟಿ ಮಾಡಿದ್ದರು. ತಮ್ಮ ನಿವಾಸಕ್ಕೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿಯನ್ನು ಪ್ರೀತಿಯಿಂದ ಬರಮಾಡಿಕೊಂಡ ಅಖಿಲೇಶ್ ಯಾದವ್ ಅವರು, ದೀರ್ಘ ಸಮಯದವರೆಗೆ ಮಾತುಕತೆ ನಡೆಸಿದ್ದರು. ಈ ಕುರಿತು ಮಾಹಿತಿ ಮಾತನಾಡಿದ್ದ ನಿಖಿಲ್ ಕುಮಾರಸ್ವಾಮಿ ಅವರು, ''ಅತ್ಯಂತ ವಿಶ್ವಾಸಪೂರ್ವಕ ಮತ್ತ ಸಹೋದರ ವಾತ್ಸಲ್ಯದೊಂದಿಗೆ ನಡೆದ ಈ ಭೇಟಿ ವೇಳೆ ಲೋಕಸಭೆ ಚುನಾವಣೆ ವಿಚಾರ ಸೇರಿದಂತೆ ಭವಿಷ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಹತ್ವದ ಸಮಾಲೋಚನೆ ನಡೆಸಲಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ನಿಖಿಲ್ ಕುಮಾರಸ್ವಾಮಿ - ಅಖಿಲೇಶ್ ಯಾದವ್ ಭೇಟಿ : ಲೋಕಸಭೆ ಚುನಾವಣೆ ಸೇರಿ ಸುದೀರ್ಘ ರಾಜಕೀಯ ಚರ್ಚೆ