ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಹಗರಣವೆಸಗಿರುವ ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ ಅವರು ಎಲ್ಲಾ ಆರೋಪಗಳಿಂದ ಮುಕ್ತರಾದ ನಂತರ ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹಾಕಲಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಸವಾಲು ಹಾಕಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ನನ್ನ ವಿರುದ್ಧ ಯಾವ ಮೊಕದ್ದಮೆ ಹಾಕುತ್ತಾರೋ ಹಾಕಲಿ ಎಂದು ಕುಟುಕಿದರು. ಮಾನನಷ್ಟ ಮೊಕದ್ದಮೆ ಹಾಕುತ್ತೇನೆಂದು ಹೇಳಿರುವ ರಂಗಪ್ಪನಿಗೆ ಮಾನ ಇದೆಯಾ? ಇಂಡಿಯನ್ ಸೈನ್ಸ್ನ ಲೆಟರ್ ಹೆಡ್ಅನ್ನು ರಂಗಪ್ಪ ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ. ರಂಗಪ್ಪನಿಗೆ ಇಂಡಿಯನ್ ಸೈನ್ಸ್ ಕಾಂಗ್ರೆಸ್ನ ವೇದಿಕೆಯಲ್ಲಿ ಅವಕಾಶ ನೀಡಬಾರದು ಎಂದು ಕಿಡಿಕಾರಿದರು.
ಕೆ.ಎಸ್.ಓ.ಯು.ನಲ್ಲಿ ನಡೆದಿರುವ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದ್ದೇನೆ. ಪ್ರೊಫೆಸರ್ ಕೆ.ಎಸ್.ರಂಗಪ್ಪ ಮತ್ತು ಪ್ರೊಫೆಸರ್ ಎಂ.ಜಿ.ಕೃಷ್ಣನ್ ಅವರುಗಳ ಮೇಲೆ ಈಗಾಗಲೇ ರಾಜ್ಯದ ಉಚ್ಚ ನ್ಯಾಯಾಲಯ ಮತ್ತು ರಾಜ್ಯಪಾಲರ ಆದೇಶದ ಮೇರೆಗೆ ಮೈಸೂರಿನ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ ಎಂದು ತಿಳಿಸಿದರು.
ಮುಕ್ತ ವಿ.ವಿ.ಯ ಇಂದಿನ ಉಪಕುಲಪತಿಗಳೇ ದೂರುದಾರರಾಗಿದ್ದಾರೆ. ಐದು ಲಕ್ಷ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆಸಿರುವ ಈ ಹಗರಣ ದೇಶ ವಿದೇಶಗಳಿಗೂ ವ್ಯಾಪಿಸಿದೆ. ದೇಶಾದ್ಯಂತ ಮತ್ತು ವಿದೇಶದಲ್ಲಿರುವ ನೂರಾರು ಶೈಕ್ಷಣಿಕ ಪಾಲುದಾರ ಸಂಸ್ಥೆಗಳು ಈ ಹಗರಣದಲ್ಲಿ ಭಾಗಿಯಾಗಿವೆ ಎಂದು ಆರೋಪಿಸಿದರು.