ಮೈಸೂರು: ಲಲಿತ ಮಹಲ್ ಪ್ಯಾಲೇಸ್ ಬಳಿ ನಿರ್ಮಿಸಲು ಉದ್ದೇಶಿಸಿರುವ ಹೆಲಿ ಟೂರಿಸಂಅನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರೋಧಿಸಿದ್ದಾರೆ.
ಮೈಸೂರಿನಲ್ಲಿ ಹೆಲಿಟೂರಿಸಂಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಮರಗಳನ್ನ ಕತ್ತರಿಸಿ ಹೆಲಿ ಟೂರಿಸಂ ಮಾಡಲು ಸಜ್ಜಾದ ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ 'ಸೇವ್ ಮೈಸೂರು' ಹೆಸರಿನಲ್ಲಿ ‘ಮರಗಳನ್ನ ಉಳಿಸಿ.. ಮೈಸೂರು ಉಳಿಸಿ’ ನಡೆಸುತ್ತಿರುವ ಅಭಿಯಾನಕ್ಕೆ ಸಾರ್ವಜನಿಕರು ಉತ್ತಮ ಬೆಂಬಲ ನೀಡುತ್ತಿದ್ದು, ಇದಕ್ಕೆ ಸಿದ್ದರಾಮಯ್ಯ ಕೂಡ ಟ್ವಿಟ್ಟರ್ ಮೂಲಕ ಸಾಥ್ ನೀಡಿದ್ದಾರೆ.
ಮರಗಳನ್ನ ಕತ್ತರಿಸಿ ನೂತನ ಹೆಲಿಪ್ಯಾಡ್ ನಿರ್ಮಿಸಲು ಮುಂದಾಗಿರುವ ಸರ್ಕಾರವು ತನ್ನ ನಿರ್ಧಾರವನ್ನು ವಾಪಸ್ ಪಡೆಯಬೇಕು. ಇದರ ವಿರುದ್ಧ ಸಿಡಿದೆದ್ದಿರುವ ಮೈಸೂರಿನ ಜನತೆ ಜೊತೆ ನಾನು ಇದ್ದೇನೆ ಎಂದು ಟ್ವಿಟ್ಟರ್ನಲ್ಲಿ ಹೇಳಿದ್ದಾರೆ.
ನೂತನ ಹೆಲಿಪ್ಯಾಡ್ ಹಾಗೂ ಹೆಲಿ ಟೂರಿಸಂಗಾಗಿ ನಿರ್ಮಿಸಲು ಮರಗಳನ್ನ ಗುರುತು ಮಾಡಿರುವ ಪ್ರವಾಸೋಧ್ಯಮ ಇಲಾಖೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜನರು ಕಿಡಿಕಾರಿದ್ದಾರೆ.