ಮೈಸೂರು: ಕಾಡಿನಲ್ಲಿ ಮರಗಳ್ಳರನ್ನು ಹುಡುಕುವ ನೆಪದಲ್ಲಿ ಆದಿವಾಸಿಗಳಾದ ಇಬ್ಬರು ಗರ್ಭಿಣಿಯರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಎಚ್.ಡಿ.ಕೋಟೆ ತಾಲೂಕಿನ ಮೇಟಿಕುಪ್ಪೆ ಹಾಡಿಯ ನೀಲಾ (25) ಹಾಗೂ ನೀಲಮ್ಮ(35) ಎಂಬ ಇಬ್ಬರು ಗರ್ಭಿಣಿಯರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ಕೆಲ ದಿನಗಳ ಹಿಂದೆ ಮೇಟಿಕುಪ್ಪೆ ಅರಣ್ಯ ಪ್ರದೇಶದಲ್ಲಿ ಸಾಗುವಣಿ ಮರಗಳನ್ನು ಕದ್ದು ಖದೀಮರು ಪರಾರಿಯಾಗಿದ್ದರು. ಈ ಸ್ಥಳಕ್ಕೆ ಭೇಟಿ ನೀಡಿದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಯೋಜನೆ ನಿರ್ದೇಶಕ ನಾರಾಯಣಸ್ವಾಮಿ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿ, ಮರಗಳ್ಳರನ್ನು ಬಂಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೇಟಿಕುಪ್ಪೆ ಗ್ರಾಮಕ್ಕೆ ತೆರಳಿದ ಅರಣ್ಯ ಇಲಾಖೆ ಸಿಬ್ಬಂದಿ, ವಿಚಾರಣೆ ನೆಪದಲ್ಲಿ ನಮ್ಮ ಮೇಲೆ ಹಲ್ಲೆ ಮಾಡಿದರು ಎಂದು ಗರ್ಭಿಣಿಯರು ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಮ್ಮ ಸಿಬ್ಬಂದಿ ಯಾರ ಮೇಲೂ ಹಲ್ಲೆ ಮಾಡಿಲ್ಲ. ಹಲ್ಲೆ ಮಾಡಿದ್ದರೆ ತನಿಖೆ ನಡೆಸುತ್ತೇವಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.