ಮೈಸೂರು: ಬಾವಿಯೊಂದರಲ್ಲಿ ಚಿರತೆ ಬಿದ್ದಿದೆ ಎಂದು ಗ್ರಾಮಸ್ಥರ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಮುಂದುವರೆಸಿದ್ದು, ಚಿರತೆ ಮಾತ್ರ ಪತ್ತೆಯಾಗಿಲ್ಲ.
ಹೆಚ್.ಡಿ.ಕೋಟೆ ತಾಲೂಕಿನ ಕಾರಾಪುರ ಬಳಿಯ ಗ್ರಾಮದ ಮನೆಯ ಹಿಂಭಾಗದ ಬಾವಿಯಲ್ಲಿ ಚಿರತೆಯೊಂದು ಬಿದ್ದಿದೆ ಎಂದು ಶನಿವಾರ ಸಂಜೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಬಾವಿಯ ಬಳಿ ಬೋನ್ ಇರಿಸಿ ಚಿರತೆಯನ್ನು ಹುಡುಕಾಡಿದರು. ಆದರೆ ಚಿರತೆ ಪತ್ತೆಯಾಗಿರಲಿಲ್ಲ.
![ಚಿರತೆ ರಕ್ಷಿಸಲು ವಿಶಿಷ್ಟ ಕಾರ್ಯಾಚರಣೆ!](https://etvbharatimages.akamaized.net/etvbharat/prod-images/10:21:42:1595220702_kn-mys-1-leopard-finding-news-7208092_20072020101236_2007f_1595220156_1062.jpg)
ನಿನ್ನೆ ಭಾನುವಾರ ಮತ್ತೆ ಕಾರ್ಯಾಚರಣೆ ಮುಂದುವರೆಸಿದ ಅರಣ್ಯ ಅಧಿಕಾರಿಗಳು, ಬೋನಿನ ಒಳಗಡೆ ಅರಣ್ಯ ಅಧಿಕಾರಿ ಸಿದ್ದರಾಜು ಅವರನ್ನು ಕೂರಿಸಿ ಹಗ್ಗದ ಸಹಾಯದಿಂದ ಬೋನ್ 100 ಅಡಿ ಬಾವಿಯೊಳಗೆ ಬಿಟ್ಟು ಪರೀಕ್ಷೆ ಮಾಡಿದಾಗ ಬಾವಿಯಲ್ಲಿ ಚಿರತೆ ಇಲ್ಲ ಎಂದು ಗೊತ್ತಾಯಿತು. ಆದರೂ ಗ್ರಾಮಸ್ಥರು ಚಿರತೆ ಬಾವಿಯೊಳಗೆ ಇರುವ ಕೊರಕಲು ಗುಹೆ ಒಳಗೆ ಇದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದು, ಇಂದು ಅರಣ್ಯ ಅಧಿಕಾರಿಗಳು ಹೆಚ್ಚುವರಿ ಸಿಬ್ಬಂದಿಯೊಂದಿಗೆ ಸ್ಥಳದಲ್ಲಿ ಚಿರತೆಯ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದ್ದಾರೆ.