ಮೈಸೂರು : ಕೇಂದ್ರದ ಹೆಸರಾಂತ ಸಂಸ್ಥೆ ಸಿಎಫ್ಟಿಆರ್ಐ ವತಿಯಿಂದ ’’ಒಂದು ವಾರ ಒಂದು ಪ್ರಯೋಗಾಲಯ, ಆಹಾರ ಸಂಶೋಧನೆಯ ಸಂಭ್ರಮೋತ್ಸವದ‘‘ ಭಾಗವಾಗಿ ಏರ್ಪಡಿಸಿದ್ದ ಎರಡು ದಿನಗಳ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ಇಲ್ಲಿಗೆ ಭೇಟಿ ನೀಡಿದ ಸಾರ್ವಜನಿಕರು, ವಿದ್ಯಾರ್ಥಿಗಳನ್ನು ಇಲ್ಲಿನ ವಿವಿಧ ರೀತಿ ಆಹಾರೋತ್ಪನ್ನ ತಯಾರಿಸುವ ವಿಶೇಷ ಯಂತ್ರಗಳು, ಆಹಾರ ತಯಾರಿ ಪ್ರಕ್ರಿಯೆ ಚಟುವಟಿಕೆಗಳನ್ನು ಕಂಡು ನಿಬ್ಬೆರಗಾದರು. ಸಿಎಫ್ಟಿಆರ್ಐ ಆಹಾರ ಮಾದರಿಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮನಸೋತರು.
"ನಿಮ್ಮ ಆಹಾರ ನಮ್ಮ ಕಾಳಜಿ" ಎಂಬ ಸಂದೇಶದೊಂದಿಗೆ ವಿಶೇಷ ಯಂತ್ರಗಳು ಮತ್ತು ಆಹಾರ ತಯಾರಿ ಪ್ರಕ್ರಿಯೆ ಚಟುವಟಿಕೆಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಆಸಕ್ತ ಸಾರ್ವಜನಿಕರು ಮತ್ತು ವಿವಿಧ ಶಾಲಾ - ಕಾಲೇಜು ವಿದ್ಯಾರ್ಥಿಗಳು ಭೇಟಿ ನೀಡುವ ಮೂಲಕ ಆಹಾರೋತ್ಪನ್ನಗಳನ್ನು ತಯಾರಿಸುವ, ಸಂಸ್ಕರಿಸುವ ಹೊಸ ಯಂತ್ರಗಳನ್ನು ನೋಡಿ ಅವುಗಳ ಬಗ್ಗೆ ಮಾಹಿತಿಯನ್ನು ತಿಳಿದು ಕೊಂಡರು. ಒಂದೇ ಗಂಟೆಯಲ್ಲಿ 400 ದೋಸೆಗಳನ್ನು ತಯಾರಿಸುವ ಎಲ್ಬಿಜಿ ಆಧಾರಿತ ಸ್ವಯಂಚಾಲಿತ ಮಿಷಿನ್ ಕೂಡ ಪ್ರಮುಖ ಆಕರ್ಷಣೆಯಾಗಿತ್ತು.
ಸ್ವಯಂ ಚಾಲಿತ ಆಯಿಲ್ ಸ್ಪ್ರೈಯೊಂದಿಗೆ ರೋಲಿಂಗ್ ಪ್ರಕ್ರಿಯಲ್ಲಿ ದೋಸೆಗಳನ್ನು ತಯಾರಿಸುವುದು ಇದರ ಕಾರ್ಯ ವಿಧಾನವಾಗಿದೆ. ಸಿರಿಧಾನ್ಯಗಳ ಹೊಟ್ಟು ತೆಗೆಯುವ ಯಂತ್ರ ಪೆಡಲ್ ಚಾಲಿತ ಸಿರಿಧಾನ್ಯಗಳ ಹೊಟ್ಟು ತೆಗೆಯುವ ಯಂತ್ರದಲ್ಲಿ ಪೆಡಲ್, ಬ್ಲೋರ್ವ ಹಾಗೂ ಪ್ರತ್ಯೇಕಗೊಳಿಸುವ ಕೊಳವೆ ಹೀಗೆ 3 ಭಾಗಗಳಿವೆ. ಪೆಡಲ್ ತುಳಿಯುತ್ತಿದ್ದಂತೆ, ಅದಕ್ಕೆ ಜೋಡಿಸಿರುವ ಚಿಕ್ಕ ಫ್ಯಾನ್ ತಿರುಗಲು ಆರಂಭವಾಗುತ್ತದೆ. ಅದರ ಮೇಲ್ಭಾಗದಲ್ಲಿ ಚಿಕ್ಕದಾದ ಕಿಂಡಿಯಿದ್ದು, ಅದಕ್ಕೆ ಕಾಳನ್ನು ಸುರಿದರೆ ಕಾಳು ಮತ್ತು ಹೊಟ್ಟು ಬೇರ್ಪಡುತ್ತದೆ. ಇದರಿಂದ ದೇಹಕ್ಕೆ ವ್ಯಾಯಾಮವೂ ಆಗುತ್ತದೆ.
ಚಪಾತಿ ತಯಾರಿಸುವ ಯಂತ್ರ, ಕಡಲೇ ಬೀಜ ಹುರಿಯುವ ಯಂತ್ರ ಹೀಗೆ ಒಣ ಆಹಾರ ಉತ್ಪನ್ನಗಳು, ಪುಡ್ ಪ್ಯಾಕ್ ಮಾಡುವ ವಿಧಾನಗಳು, ಪ್ರೋಟೀನ್ ಯುಕ್ತ ಆಹಾರ ಸೇವೆಯಿಂದ ಆಗುವ ಅನುಕೂಲ - ಅನಾನುಕೂಲಗಳು ಸೇರಿದಂತೆ ಮತ್ತಿತರೆ ಆಹಾರನ್ನು ತಯಾರಿಸುವ ತಂತ್ರಜ್ಞಾನಗಳು ವೀಕ್ಷಕರ ಗಮನ ಸೆಳೆದವು.
ಒಂದು ಗಂಟೆಗೆ ಸುಮಾರು 250 ಜೋಳದ ರೊಟ್ಟಿಯನ್ನು ಮಾಡುವ ಹೊಸ ಯಂತ್ರವು ಈ ಬಾರಿ ನೋಡುಗರನ್ನು ಆಕರ್ಷಿಸಿತು. ಇದು ಕೈಯಿಂದ ಭಾಗಶಃ ಕೆಲಸವನ್ನು ಅವಲಂಬಿಸಿರುವ, ಸ್ವಯಂಚಾಲಿತ ಯಂತ್ರವಾಗಿದೆ. ಇತ್ತೀಚಿನ ದಿನಗಳಲ್ಲಿ ಜೋಳದ ರೊಟ್ಟಿಗೆ ಹೆಚ್ಚಿನ ಬೇಡಿಕೆ ಇದೆ. ಬೆಂಗಳೂರು ಒಂದರಲ್ಲೇ ವಾರಕ್ಕೆ 15 ರಿಂದ 20 ಲಕ್ಷ ರೊಟ್ಟಿಗೆ ಬೇಡಿಕೆ ಇರುತ್ತದೆ. ಎಲ್ಲ ರೀತಿಯ ಮಿಲೆಟ್ ಅನ್ನು ಸ್ವಚ್ಛಗೊಳಿಸುವ, ಡಿರೆಮೆಂಬರಿಂಗ್ ಮಾಡುವ, ಗಿರಣಿ ಮಾಡುವ, ಪುಡಿಮಾಡುವ, ಶೀಟಿಂಗ್ ಮಾಡುವ ಮೊಬೈಲ್ ಮಿಲೆಟ್ ಸಂಸ್ಕರಣ ಘಟಕವು ಗಂಟೆಗೆ 50 ರಿಂದ 100 ಕೆಜಿ ಮಿಲೆಟ್ ಅನ್ನು ಸಂಸ್ಕರಣೆ ಮಾಡುತ್ತದೆ.
ಪ್ರದರ್ಶನ ವೀಕ್ಷಣೆಯಲ್ಲಿ ತೊಡಗಿದ್ದ ವಿದ್ಯಾರ್ಥಿಗಳು ದೋಸೆ ಮೆಕಿಂಗ್ ಮಿಷಿನ್ ಮೂಲಕ ತಯಾರಾದ ದೋಸೆಗಳನ್ನು ಸವಿದರು. ಅಲ್ಲದೇ, ಹುರಿದ ಕಡಲೆ ಬೀಜವನ್ನು ತಿಂದು ಖುಷಿಪಟ್ಟರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹಾಲಿನ ಕಲಬೆರಕೆ ಹೇಗೆ ತಿಳಿಯುವುದು, ಆಹಾರ ಕಲ್ಮಶೀಕರಣ, ಆಹಾರ ಲೇಬಲಿಂಗ್, ಆಹಾರ ನೈರ್ಮಲ್ಯ ಸೇರಿದಂತೆ ಆಹಾರ ಸುರಕ್ಷತೆಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಲಾಯಿತು.
ಇದನ್ನೂ ಓದಿ : ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಸಿಎಂ ತವರು ಜಿಲ್ಲೆ ಮೈಸೂರಿನ ನಿರೀಕ್ಷೆಗಳೇನು..?