ಮೈಸೂರು: ದಸರಾ ಮಹೋತ್ಸವದ ಯಶಸ್ವಿ ರೂವಾರಿಗಳಾದ ಗಜಪಡೆಗೆ ಇಂದು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ನಾಡಿನಿಂದ ಕಾಡಿಗೆ ಕಳುಹಿಸಿಕೊಡಲಾಯಿತು. ಈ ವೇಳೆ ಕ್ಯಾಪ್ಟನ್ ಅಭಿಮನ್ಯು ಹಾಗೂ ತಂಡಕ್ಕೆ ಶುಭ ಕೋರಲಾಯಿತು.
ಕ್ಯಾಪ್ಟನ್ ಅಭಿಮನ್ಯು, ಗೋಪಾಲಸ್ವಾಮಿ, ಧನಂಜಯ, ವಿಕ್ರಮ, ಅಶ್ವತ್ಥಾಮ, ಚೈತ್ರ, ಲಕ್ಷ್ಮಿ, ಕಾವೇರಿ ಆನೆಗಳನ್ನು ಅರಮನೆ ಆವರಣದಲ್ಲಿ ನಿಲ್ಲಿಸಿ, ಬೆಲ್ಲ, ತೆಂಗಿನಕಾಯಿ, ಬಾಳೆಹಣ್ಣು ನೀಡಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದ ನಂತರ ಅರಮನೆ ಆಡಳಿತ ಮಂಡಳಿಯಿಂದ ಅರಣ್ಯ ಇಲಾಖೆಗೆ ಆನೆಗಳನ್ನು ಹಸ್ತಾಂತರ ಮಾಡಲಾಯಿತು.
ಸೆ.13ರ ಗಜಪಯಣದ ಮೂಲಕ ಸಾಂಸ್ಕೃತಿಕ ನಗರಿಗೆ ಆಗಮಿಸಿದ್ದ 8 ಆನೆಗಳಿಗೆ, ಜಂಬೂಸವಾರಿ ಮೆರವಣಿಗೆ ಮುಗಿಯುವವರೆಗೂ ರಾಜಾತಿಥ್ಯ ನೀಡಿ ಚೆನ್ನಾಗಿ ನೋಡಿಕೊಳ್ಳಲಾಯಿತು. ದಸರಾ ಮುಗಿದ ಬಳಿಕ ಅವುಗಳನ್ನು ಮತ್ತೇ ಅವುಗಳ ಕಾಡಿಗೆ ಕಳುಹಿಸಿಕೊಡಲಾಯಿತು.
ಡಿಸಿಎಫ್ ಕಾರಿಕಾಳನ್, ಅರಮನೆ ಮಂಡಳಿಯ ಉಪನಿರ್ದೇಶಕ ಸುಬ್ರಹ್ಮಣ್ಯ, ಆರ್ಎಫ್ಒ ಕೆ. ಸುರೇಂದ್ರ ಹಾಗೂ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಸಿಬ್ಬಂದಿ ಈ ಸಮಯದಲ್ಲಿ ಹಾಜರಿದ್ದರು.