ಮೈಸೂರು: ಆಹ್ವಾನ ಪತ್ರಿಕೆ ಕೊಡುವ ನೆಪದಲ್ಲಿ ಮನೆಗೆ ನುಗ್ಗಿ ದಂಪತಿಗೆ ಚಾಕುವಿನಿಂದ ಇರಿದು ಸುಲಿಗೆ ಮಾಡಲು ವಿಫಲ ಯತ್ನ ನಡೆಸಿ ಪರಾರಿಯಾಗಿದ್ದ ದಂಪತಿಯನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವೀರೇಶ್ ಹಾಗೂ ಪತ್ನಿ ಪ್ರಿಯಾಂಕ ಬಂಧಿತ ಆರೋಪಿಗಳು. ಆನ್ಲೈನ್ ಗೇಮ್ ಚಟಕ್ಕೆ ಬಿದ್ದು ನಷ್ಟ ಹೊಂದಿದ್ದ ಆರೋಪಿ ವೀರೇಶ್ ದಂಪತಿ ಸಮೇತವಾಗಿ ಚಿನ್ನದ ವ್ಯಾಪಾರಿಯ ಮನೆಗೆ ಬಂದು ಹಣ ನೀಡುವಂತೆ ಧಮ್ಕಿ ಹಾಕಿದ್ದ. ಹಣ ನೀಡದಿದ್ದಾಗ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು.
ಪ್ರಕರಣದ ಸಂಪೂರ್ಣ ವಿವರ: ಕಳೆದ ಬುಧವಾರ(ಆ.17) ಮಧ್ಯಾಹ್ನ ಓರ್ವ ಪುರುಷ ಹಾಗೂ ಮಹಿಳೆ ಜ್ಯುವೆಲ್ಲರಿ ಮಾಲೀಕ ಬಾಬುರಾಮ್ ಎಂಬುವವರ ಹೂಟಗಳ್ಳಿಯ ಕೆಹೆಚ್ಬಿ ಕಾಲೋನಿಯ ನಿವಾಸಕ್ಕೆ ಆಗಮಿಸಿ ಕಾಲಿಂಗ್ ಬೆಲ್ ಮಾಡಿದ್ದಾರೆ. ನಿಮ್ಮ ಮಗ ಹರೀಶ್ಗೆ ಗೃಹ ಪ್ರವೇಶದ ಆಹ್ವಾನ ಪತ್ರಿಕೆ ನೀಡಬೇಕು. ಅವನನ್ನು ಕರೆಯಿರಿ ಎಂದು ಮನೆಯ ಹೊರಭಾಗದಲ್ಲೇ ನಿಂತು ಹೇಳಿದ್ದಾರೆ.
ಆಗ ಬಾಬುರಾಮ್ ಮಗ ಮನೆಯಲ್ಲಿ ಇಲ್ಲ ಎಂದು ಹೇಳಿದಾಗ, ನಮಗೆ ಕುಡಿಯಲು ನೀರು ಕೊಡಿ ಎಂದು ಕೇಳಿದ್ದಾರೆ. ನೀರು ತರಲು ಹೋದ ಬಾಬುರಾವ್ ಜೊತೆಯಲ್ಲೇ ಮನೆಗೆ ನುಗ್ಗಿದ ಆರೋಪಿಗಳು ಹಣ ನೀಡುವಂತೆ ಬೆದರಿಸಿದ್ದಾರೆ. ಹಣ ಇಲ್ಲ ಎಂದಾಗ ನಿಮ್ಮ ಮಗ ಹರೀಶ್ ಅವರನ್ನು ಕರೆಯಿರಿ ಎಂದು ತಿಳಿಸಿದ್ದಾರೆ. ಹಣ ನೀಡದಿದ್ದಾಗ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಬಿಡಿಸಲು ಬಂದ ಬಾಬುರಾವ್ ಅವರ ಪತ್ನಿ ಕಮಲಬಾಯಿ ಅವರಿಗೂ ಚೂರಿಯಿಂದ ಇರಿದಿದ್ದಾರೆ. ಕಮಲಬಾಯಿ ಜೋರಾಗಿ ಕೂಗಿಕೊಂಡಾಗ ಜನ ಸೇರುತ್ತಾರೆ ಎಂದು ಹೆದರಿ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದರು.
ಜೂಜಿನ ಚಟಕ್ಕಾಗಿ 5 ಲಕ್ಷ ಸಾಲ: ಹುಬ್ಬಳ್ಳಿ ಮೂಲದವರಾಗಿದ್ದ ವೀರೇಶ್ ದಂಪತಿ ಕಳೆದ 10 ವರ್ಷಗಳಿಂದ ಮೈಸೂರಿನಲ್ಲಿ ವಾಸವಾಗಿದ್ದರು. ಚಿನ್ನದ ವ್ಯಾಪಾರಿ ಬಾಬುರಾವ್ ಅಂಗಡಿಯ ಮೇಲೆ ಟ್ಯಾಟೂ ಅಂಗಡಿಯಿಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದರು. ಬಿಡುವಿನ ಸಮಯದಲ್ಲಿ ಆನ್ಲೈನ್ ಗೇಮ್ಗಳನ್ನು ಆಡುತ್ತಿದ್ದ. ಇದು ಮುಂದೆ ಚಟವಾಗಿ ಬೆಳೆಯಿತು. ಜೂಜು ಕಟ್ಟಿ ಆಟವಾಡುತ್ತಿದ್ದರಿಂದ ಸಾಕಷ್ಟು ಹಣವನ್ನೂ ಕಳೆದುಕೊಂಡಿದ್ದ. ಅಲ್ಲದೇ ಜೂಜಿನ ಚಟದಿಂದ ಸುಮಾರು 5 ಲಕ್ಷ ಹಣ ಸಾಲ ಮಾಡಿಕೊಂಡಿದ್ದ.
ಸಾಲಗಾರರ ಕಾಟ ಮತ್ತು ಹಣದ ಅನಿವಾರ್ಯತೆಯಿಂದ ಆತ ಚಿನ್ನದ ವ್ಯಾಪಾರಿಯನ್ನು ಬೆದರಿಸಿ ಹಣ ಪಡೆಯ ಯೋಜನೆ ರೂಪಿಸಿದ್ದ. ತಾನು ಒಬ್ಬನೇ ಹೋದರೆ ಮನೆಯೊಳಗೆ ಸೇರಿಸುವುದಿಲ್ಲ ಎಂದು ಜತೆಗೆ ಪತ್ನಿಯನ್ನು ಕರೆದುಕೊಂಡು ಹೋಗಿದ್ದ. ಹಣ ಕೊಡಲು ನಿರಾಕರಿಸಿದ ಕಾರಣ ಬಾಬುರಾವ್ ದಂಪತಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ವಿಜಯನಗರ ಪೊಲೀಸರು ತಂಡ ರಚಿಸಿ ಆರೋಪಿಗಳ ಸೆರೆಗೆ ಬಲೆ ಬೀಸಿದ್ದರು. ಸದ್ಯ ಪೊಲೀಸರ ತಂಡ ದಾವಣಗೆರೆಯಲ್ಲಿ ದಂಪತಿಯನ್ನ ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ಮಾರಕಾಸ್ತ್ರಗಳೊಂದಿಗೆ ಗ್ರಾಮಕ್ಕೆ ನುಗ್ಗಿದ ಪುಡಿ ರೌಡಿಗಳು: ಪುಂಡರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಜನರು