ಮೈಸೂರು : ದೇಶದಲ್ಲಿ ಇದೇ ಮೊದಲ ಬಾರಿಗೆ ನಗರದ ಅಪೋಲೊ ಬಿಜಿಎಸ್ ಆಸ್ಪತ್ರೆಯು ಕೃತಕ ಬುದ್ಧಿಮತ್ತೆ ಆಧಾರಿತ ಎಂಡೋಸ್ಕೊಪಿ ಕ್ಯಾಡ್ ಐ ತಂತ್ರಜ್ಞಾನ ಅಳವಡಿಸಿಕೊಂಡಿದೆ. ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿರುವ 2 ದಿನಗಳ ಜಿಐ ಅಪ್ಡೇಟ್-2023 ಸಮ್ಮೇಳನದಲ್ಲಿ ಕರುಳಿನ ಕ್ಯಾನ್ಸರ್ಅನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡುವ ಕ್ಯಾಡ್ ಐ ತಂತ್ರಜ್ಞಾನಕ್ಕೆ ಜಪಾನಿನ ಜೀಚಿ ವೈದ್ಯಕೀಯ ವಿಶ್ವವಿದ್ಯಾನಿಲಯದ ಅಸ್ಪತ್ರೆಯ ಎಂಡೋಸ್ಕೋಪಿ ಕೇಂದ್ರದ ನಿರ್ದೇಶಕ ಪ್ರೊ.ಹಿರೊನೊರಿ ಯಮಾಮೊಟೊ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, "ಮುಂದುವರಿಯುತ್ತಿರುವ ದೇಶಗಳಿಗೆ ಕ್ಯಾಡ್ ಐ ತಂತ್ರಜ್ಞಾನ ಅನುಕೂಲವಾಗಲಿದೆ. ರೋಗಿಗಳನ್ನು ಬೇಗ ಗುಣಪಡಿಸಲು ಇದು ಸಹಕಾರಿ" ಎಂದರು. ಇದೇ ವೇಳೆ, ಕರುಳಿನ ಕ್ಯಾನ್ಸರ್ ರೋಗಿಗಳಿಗೆ ಈ ತಂತ್ರಜ್ಞಾನದಿಂದ ಸಿಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.
ಅಪೋಲೋ ಬಿಜಿಎಸ್ ಆಸ್ಪತ್ರೆಯ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿಯ ಮುಖ್ಯಸ್ಥ ಡಾ.ರಾಜ್‌ಕುಮಾರ್ ಪಿ.ವಾಧ್ನಾ ಮಾತನಾಡಿ, "ಮೊದಲ ಬಾರಿಗೆ ದೇಶದಲ್ಲಿ ಕ್ಯಾಡ್ ತಂತ್ರಜ್ಞಾನವನ್ನು ಪ್ರಾರಂಭಿಸಿರುವುದು ಹೆಮ್ಮೆಯ ವಿಷಯ. ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ಗುಣಪಡಿಸುವಲ್ಲಿ ಆರಂಭಿಕ ಹಂತದಲ್ಲೇ ರೋಗ ಪತ್ತೆ ಹಚ್ಚುವುದು ಬಹಳ ಮುಖ್ಯ. ಕ್ಯಾಡ್ ಐ ಆಧಾರಿತ ಎಂಡೋಸ್ಕೋಪ್ ತಂತ್ರಜ್ಞಾನದಿಂದ ಇದು ಸಾಧ್ಯವಾಗುತ್ತದೆ" ಎಂದರು.
ಮುಖ್ಯ ಗ್ಯಾಸ್ಟ್ರೋಇಂಟಿಸ್ಟಿನಲ್ ಸರ್ಜನ್ ಡಾ.ಎಸ್.ನೈರುತ್ಯ ಮಾತನಾಡಿ, "ವಿಶ್ವ ಪ್ರಸಿದ್ಧ ಶಸ್ತ್ರಚಿಕಿತ್ಸಾ ತಜ್ಞರು ಲ್ಯಾಪರೋಸ್ಕೋಪಿಕ್ ಬಾರಿಯಾಟ್ರಿಕ್, ಲಿರ್ವ ಮತ್ತು ಪ್ಯಾಂಕ್ರಿಯಾಟಿಕ್ ಶಸ್ತ್ರಚಿಕಿತ್ಸೆಯ ಕ್ಷೇತ್ರದಲ್ಲಿ ಹೊಸ ಪ್ರಗತಿ ತೋರಿಸಿ ಕೊಟ್ಟಿದ್ದಾರೆ" ಎಂದು ಅಭಿಪ್ರಾಯಪಟ್ಟರು.
ಆಸ್ಪತ್ರೆಯ ಉಪಾಧ್ಯಕ್ಷ ಎನ್.ಜಿ.ಭರತೀಶ ರೆಡ್ಡಿ ಮಾತನಾಡಿ, "ಮಷಿನ್ ಲರ್ನಿಂಗ್ ಆಧಾರಿತ ವ್ಯವಸ್ಥೆಯಿಂದ ಕ್ಯಾನ್ಸರ್ ಮತ್ತು ಕ್ಯಾನ್ಸರ್ ಕಾರಕವಲ್ಲದ ಗಾಯಗಳ ನಡುವಿನ ವ್ಯತ್ಯಾಸವನ್ನು ಕ್ಯಾಡ್ ಐ ತಂತ್ರಜ್ಞಾನದ ಮೂಲಕ ಸುಲಭವಾಗಿ ಗುರುತಿಸಬಹುದು. ಇದರಿಂದ ಜಿಐ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಲು ಮತ್ತು ಚಿಕಿತ್ಸೆ ನೀಡಲು ಸಹಾಯವಾಗಲಿದೆ. ತಂತ್ರಜ್ಞಾನವು ಈಗಾಗಲೇ ಆಸ್ಪತ್ರೆಯಲ್ಲಿರುವ ಸೇವೆಗಳಿಗೆ ಮತ್ತೊಂದು ಸೇರ್ಪಡೆ. ಈ ಸೌಲಭ್ಯಗಳೊಂದಿಗೆ ರೋಗಿಗಳು ಹೊರಗಿನ ಪ್ರದೇಶಗಳಿಗೆ ತೆರಳದೇ ಮೈಸೂರಿನಲ್ಲೇ ಇದ್ದುಕೊಂಡು ವಿಶ್ವ ದರ್ಜೆಯ ಸೇವೆಗಳು ಮತ್ತು ಚಿಕಿತ್ಸೆ ಪಡೆಯಬಹುದು" ಎಂದು ತಿಳಿಸಿದರು.
ಹೈದರಾಬಾದ್ನ ಏಷ್ಯನ್ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿಯ ಮುಖ್ಯಸ್ಥ 'ಪದ್ಮಭೂಷಣ' ಡಾ.ಡಿ.ನಾಗೇಶ್ವರ ರೆಡ್ಡಿ, ಜೆಎಸ್‌ಎಸ್ ಆಸ್ಪತ್ರೆಯ ಡೀನ್ ಮತ್ತು ನಿರ್ದೇಶಕ ಎಚ್.ಬಸವಣ್ಣ ಗೌಡ ಮತ್ತಿತರರು ಇದ್ದರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹೆಸರಾಂತ ಗ್ಯಾಸ್ಟ್ರೋಎಂಟರಾಲಜಿಸ್ಟ್ ಒಳಗೊಂಡ 400ಕ್ಕೂ ಹೆಚ್ಚು ವೈದ್ಯರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಸಮ್ಮೇಳನದಲ್ಲಿ ನೇರ ಪ್ರಸಾರದ ಮೂಲಕ ಸಭಿಕರಿಗೆ ಎಂಡೋಸ್ಕೋಪಿಕ್ ಕಾರ್ಯವಿಧಾನದ ಮೂಲಕ ಎಂಡೋಸ್ಕೊಪಿಕ್ ತಂತ್ರಜ್ಞಾನ ಬಳಸಿ ಹೊಟ್ಟೆಯಲ್ಲಿ ರಕ್ತಸ್ರಾವವಾಗುವುದನ್ನು ನಿಲ್ಲಿಸುವುದು ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನಗಳನ್ನಾಧರಿಸಿದ ತಂತ್ರಜ್ಞಾನವನ್ನು ಕಾರ್ಯಾಗಾರದಲ್ಲಿ ಪ್ರದರ್ಶಿಸಲಾಯಿತು.
ಇದನ್ನೂ ಓದಿ: ರಾಹುಲ್ ಗಾಂಧಿ ಅನರ್ಹತೆ ವಿರೋಧಿಸಿ ಮೈಸೂರಿನಲ್ಲಿ ಪ್ರತಿಭಟನೆ