ಮೈಸೂರು: ಏಳು ರಾಜ್ಯಗಳಲ್ಲಿ ಏಕಕಾಲಕ್ಕೆ ಮೂರು ದಿನ ಕಾಲ ನಡೆದ ಆನೆ ಗಣತಿ ಮುಕ್ತಾಯವಾಗಿದ್ದು. ನಾಗರಹೊಳೆಯಲ್ಲಿ ಆನೆ ಗಣತಿ ವೇಳೆ ದಾಖಲಾದ ಆನೆಗಳ ಸಂಖ್ಯೆ ಎಷ್ಟು ಎನ್ನುವುದರ ವಿವರ ಇಲ್ಲಿದೆ.
2023 ರ ಆನೆ ಗಣತಿ ಮೇ 17 ರಿಂದ ಆರಂಭವಾಗಿ ಮೇ 19 ರ ವರೆಗೆ ದಕ್ಷಿಣ ಭಾರತದ ಏಳು ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಗೋವಾ ಸೇರಿದಂತೆ 7 ರಾಜ್ಯಗಳಲ್ಲಿ ನಡೆಯಿತು. ಈ ಆನೆ ಗಣತಿಯ ನೇತೃತ್ವವನ್ನು ಕರ್ನಾಟಕ ಅರಣ್ಯ ಇಲಾಖೆ ವಹಿಸಿತ್ತು. ಅದರಂತೆ ಈ ಏಳು ರಾಜ್ಯಗಳಲ್ಲಿ ಆನೆ ಗಣತಿ ಮುಕ್ತಾಯ ಆಗಿದ್ದು. ಯಾವ್ಯಾವ ರಾಜ್ಯಗಳಲ್ಲಿ ಎಷ್ಟು ಆನೆಗಳಿವೆ ಎಂಬುದು ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಯು ಮಾಹಿತಿ ನೀಡಲಿದೆ.
ನಾಗರಹೊಳೆಯಲ್ಲಿ ಆನೆ ಗಣತಿ: ದಾಖಲಾದ ಆನೆಗಳ ಸಂಖ್ಯೆ ಎಷ್ಟು: ಕರ್ನಾಟಕದಲ್ಲಿ ಅತಿ ಹೆಚ್ಚು ಆನೆಗಳಿರುವ ಅಭಯಾರಣ್ಯ ನಾಗರಹೊಳೆ ಮಾತ್ರ ಆಗಿದೆ. ಈ ಮೂರು ದಿನಗಳ ಕಾಲ ನಡೆದ ಆನೆ ಗಣತಿಯಲ್ಲಿ ನಾಗರಹೊಳೆ ವ್ಯಾಪ್ತಿ ಅರಣ್ಯದಲ್ಲಿ 400 ಕ್ಕೂ ಹೆಚ್ಚು ಆನೆಗಳ ಸಂಖ್ಯೆ ದಾಖಲಾಗಿದೆ. ಅದರಲ್ಲಿ, ಕಬಿನಿ ಹಿನ್ನೀರಿನಲ್ಲಿ ಅತಿ ಹೆಚ್ಚು ಅಂದರೆ 150 ಕ್ಕೂ ಹೆಚ್ಚು ಆನೆಗಳು ಕಾಣಿಸಿಕೊಂಡಿವೆ. ಈ ವ್ಯಾಪ್ತಿಯ 135 ಕೆರೆ ಕಟ್ಟೆಗಳ ಬಳಿ ಗಣತಿ ವೇಳೆ ಹೆಚ್ಚಾಗಿ ಆನೆಗಳು ಪ್ರತ್ಯೇಕ್ಷವಾಗಿದ್ದವು.
ನಾಗರಹೊಳೆ ವ್ಯಾಪ್ತಿಯ 8 ವಲಯಗಳ 91 ಸ್ಥಳಗಳಲ್ಲಿ, 300 ಕ್ಕೂ ಹೆಚ್ಚು ಅರಣ್ಯ ಇಲಾಖೆಯ ಸಿಬ್ಬಂದಿ ಗಣತಿ ಕಾರ್ಯದಲ್ಲಿ ಭಾಗವಹಿಸಿದ್ದರು. ಈ ವೇಳೆ 400 ಕ್ಕೂ ಹೆಚ್ಚು ಆನೆಗಳು ಗಣತಿ ವೇಳೆ ಕಂಡುಬಂದಿವೆ ಎಂದು ಡಿಸಿಎಫ್ ಹರ್ಷಕುಮಾರ್ ಚಿಕ್ಕ ನರಗುಂದ ಅವರು ಈಟಿವಿ ಭಾರತ್ಗೆ ಮಾಹಿತಿ ನೀಡಿದ್ದು, ಇದು ಕೇವಲ ನಾಗರಹೊಳೆ ವ್ಯಾಪ್ತಿ ಅರಣ್ಯ ಪ್ರದೇಶಗಳಲ್ಲಿ ಮೂರು ದಿನಗಳ ಕಾಲ ನಡೆಸಿದ ಗಣತಿ ವೇಳೆ ಸಿಕ್ಕ ಆನೆಗಳ ವಿವರ ಇದಾಗಿದೆ ಎಂದು ತಿಳಿಸಿದ್ದಾರೆ.
ಕಾಡಾನೆ ದಾಳಿ :ಅರಣ್ಯ ರಕ್ಷಕನಿಗೆ ಗಾಯ: ಕಾಡಾನೆಯೊಂದು ಆನೆಚೌಕೂರು ವಲಯದ ಪ್ರದೇಶದಲ್ಲಿ ಆನೆ ಗಣತಿಯಲ್ಲಿ ಭಾಗವಹಿಸಿದ್ದ ಅಭಿಷೇಕ್ ಎಂಬುವರನ್ನು ಕಾಡಿನಲ್ಲಿ ಅಟ್ಟಾಡಿಸಿಕೊಂಡು ಬಂದಿದ್ದು, ಅರಣ್ಯ ರಕ್ಷಕನಿಗೆ ಗಾಯವುಂಟಾಗಿದೆ. ಅರಣ್ಯ ರಕ್ಷಕನಿಗೆ ಮಡಿಕೇರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಡಿಸಿಎಫ್ ಹರ್ಷಕುಮಾರ್ ಚಿಕ್ಕ ನರಗುಂದ ಮಾಹಿತಿ ನೀಡಿದ್ದಾರೆ.
ಆನೆ ಗಣತಿ ಹೇಗೆ ? ದಕ್ಷಿಣ ಭಾರತದ ಏಳು ರಾಜ್ಯಗಳ, ದಟ್ಟ ಕಾಡುಗಳಲ್ಲಿ ನಡೆಯುವ ಮೂರು ದಿನಗಳ ಆನೆಗಳ ಗಣತಿಯನ್ನು ಮೂರು ವಿಧಾನಗಳಲ್ಲಿ ಮಾಡಲಾಗುತ್ತದೆ. ಆನೆಗಳ ಲದ್ದಿ ಮಾದರಿಯನ್ನು ಸಂಗ್ರಹ ಮಾಡಿ, ನೇರವಾಗಿ ಏಣಿಕೆ ಮಾಡಲಾಗುತ್ತದೆ. ಅರಣ್ಯ ಇಲಾಖೆ ವ್ಯಾಪ್ತಿಯ 3-4 ಸಿಬ್ಬಂದಿ, ಅರಣ್ಯಗಳಲ್ಲಿ ನಿರ್ದಿಷ್ಟ ಬ್ಲಾಕ್ ನಲ್ಲಿ ಕಾಣಿಸುವ ಆನೆಗಳನ್ನು ಲೆಕ್ಕ ಹಾಕುವುದು ಹಾಗೂ ಗುಂಪಿನಲ್ಲಿ ಕಾಣಿಸುವ ಆನೆಗಳ ಛಾಯಾಚಿತ್ರ ತೆಗೆದು ಅದರ ಆಧಾರದ ಮೇಲೆ ಏಣಿಕೆ ಮಾಡುವುದು. ಕಾಡಿನ ಮಧ್ಯೆ ಬರುವ ಹಳ್ಳ - ಕೊಳ್ಳಗಳ ಸಮೀಪ ನೀರು ಕುಡಿಯಲು ಬರುವ ಆನೆಗಳನ್ನು ಅರಣ್ಯ ಸಿಬ್ಬಂದಿ ಲೆಕ್ಕಹಾಕುವುದು ಸೇರಿದಂತೆ ಹಲವು ಮಾನದಂಡಗಳಲ್ಲಿ ಆನೆ ಗಣತಿ ನಡೆಯಲಿದೆ.
ಇದನ್ನೂಓದಿ:ಸಿದ್ದರಾಮಯ್ಯ ಬಾಲ್ಯ ಜೀವನವೇ ಒಂದು ರೋಚಕ!: ನಾಟಿ ಕೋಳಿ ಸಾರಿನ ಪ್ರೀತಿ!