ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಾಡಂಚಿನ ಗ್ರಾಮದಲ್ಲಿ ಆನೆ ದಾಳಿ ನಡೆಸಿದ್ದು ಅಪಾರ ಪ್ರಮಾಣದ ಹಾನಿಯುಂಟಾಗಿರುವ ಘಟನೆ ಜಿಲ್ಲೆಯ ಕಾಳಚೋಳನಹಳ್ಳಿಯಲ್ಲಿ ನಡೆದಿದೆ.
ಭಾನುವಾರ ಬೆಳಗಿನ ವೇಳೆ ಕಾಳಚೋಳನಹಳ್ಳಿ ಗ್ರಾಮದ ರವೀಶ್ ಎಂಬುವರ ಮನೆಗೆ ಹಾನಿ ಮಾಡಿದ್ದ ಆನೆಯನ್ನು ಜನರು ಓಡಿಸಿದ್ದರು. ಆದರೆ ಅಲ್ಲಿಂದ ಹೊಲಕ್ಕೆ ನುಗ್ಗಿದ ಆನೆ ಜೋಳದ ಬೆಳೆಗೆ ಹಾನಿ ಮಾಡಿದೆ. ರಾತ್ರಿ ಪೂರ್ತಿ ಹೊಲದಲ್ಲೇ ಕಾಲ ಕಳೆದ ಒಂಟಿ ಸಲಗ ಇಂದು ಬೆಳಗ್ಗೆ ಉಡುಪೆಪುರ ಗ್ರಾಮಕ್ಕೆ ಬಂದಿದೆ. ಅದೇ ದಾರಿಯಲ್ಲಿ ಬೈಕ್ನಲ್ಲಿ ಬರುತ್ತಿದ್ದ ರವಿ ಎಂಬ ವ್ಯಕ್ತಿ ಆನೆಯನ್ನು ಕಂಡು ಬೈಕ್ ಬಿಟ್ಟು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಬಳಿಕ ಅಲ್ಲಿದ್ದ ಬೈಕ್ ಹಾಗೂ ಹುಲ್ಲಿನ ಮೆದೆಯನ್ನು ಆನೆ ಧ್ವಂಸಗೊಳಿಸಿದೆ.
ಇಷ್ಟೆಲ್ಲಾ ಅವಾಂತರಗಳು ಸೃಷ್ಟಿಯಾಗಿದ್ದರೂ ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.