ಮೈಸೂರು : ಧಾರ್ಮಿಕ ಸ್ವಾತಂತ್ರ್ಯ ಸಂವಿಧಾನ ಬದ್ಧವಾದ ಹಕ್ಕು. ಯಾರು ಯಾವ ಆಚರಣೆ ಬೇಕಾದರೂ ಮಾಡಬಹುದು. ಯಾವ ಆಚರಣೆ ಮಾಡಬೇಕು. ಯಾವುದನ್ನು ಮಾಡಬಾರದು ಎಂದು ಸರ್ಕಾರ ನಿರ್ಧರಿಸಲು ಸಾಧ್ಯವಿಲ್ಲ ಎನ್ನುವ ಮೂಲಕ ಮಹಿಷ ದಸರಾಕ್ಕೆ ಅವಕಾಶ ನೀಡುವುದಾಗಿ ಪರೋಕ್ಷವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಸುಳಿವು ನೀಡಿದರು.
ನಗರದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಿಷ ದಸರಾಕ್ಕೆ ಅವಕಾಶ ನೀಡುವ ವಿಚಾರ ಇನ್ನೂ ನಮ್ಮ ಮುಂದೆ ಬಂದಿಲ್ಲ. ಮೈಸೂರು ದಸರಾಕ್ಕೆ ಸಿದ್ಧತೆ ಮಾಡಿಕೊಳ್ಳಲು ಸಿಎಂ ಸೂಚನೆ ನೀಡಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ಉನ್ನತ ಮಟ್ಟದ ಸಮಿತಿ ಸಭೆ ನಡೆಯಲಿದೆ. ಅದಕ್ಕೆ ಬೇಕಾದ ಪೂರ್ವ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ನಿಗದಿಗೊಳಿಸಿರುವ ಶೇ. 50 ರಷ್ಟು ಮೀಸಲಾತಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಮೀಸಲಾತಿಗೆ ಸಂಬಂಧಿಸಿದಂತೆ ಹಲವಾರು ಗೊಂದಲಗಳು ಉಂಟಾಗಿದ್ದು, ಇದರ ನಿವಾರಣೆಗೆ ಸರ್ಕಾರ ಮುಂದಾಗಿದೆ. ಚುನಾವಣೆ ಸಂದರ್ಭದಲ್ಲಿ ನೀಡಿದ್ದ 5 ಗ್ಯಾರಂಟಿಗಳನ್ನು ಗ್ಯಾರಂಟಿಯಾಗಿ ಜಾರಿಗೊಳಿಸಲಿದ್ದೇವೆ. ಈಗಾಗಲೇ ಈ ಬಾರಿಯ ಬಜೆಟ್ನಲ್ಲಿ ಇದಕ್ಕಾಗಿ ಹಣ ಮೀಸಲು ಇಡಲಾಗಿದೆ ಎಂದರು.
ಮುಖ್ಯಮಂತ್ರಿಗಳೊಂದಿಗೆ ದಸರಾ ಉನ್ನತ ಮಟ್ಟದ ಸಭೆ: ವಿಶ್ವವಿಖ್ಯಾತ ದಸರಾ ಮಹೋತ್ಸವವನ್ನು ಈ ಬಾರಿ ಅದ್ಧೂರಿಯಾಗಿ ನಡೆಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ದಸರಾ ಉನ್ನತ ಮಟ್ಟದ ಸಭೆ ನಡೆಸಲಾಗುವುದು. ಆನಂತರ ಮುಂದಿನ ಕಾರ್ಯಸೂಚಿ ಅನುಷ್ಠಾನಗೊಳಿಸಲಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಚಿನ್ನದ ಅಂಬಾರಿಯಲ್ಲಿ ಮಹಿಷನ ಫೋಟೋ ಇಡಬೇಕು: ಪ್ರೊ. ಮಹೇಶ್ ಚಂದ್ರಗುರು
ಪ್ರವಾಸಿ ತಾಣಗಳಿಗೆ ಹರಿದುಬಂದ ಜನರು: ಇನ್ನೊಂದೆಡೆ ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟ ಹಾಗೂ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ದಂಡು ಇಂದು ಆಗಮಿಸಿತ್ತು. ಅಭಯಾರಣ್ಯ ವ್ಯಾಪ್ತಿಯಲ್ಲಿರುವ ಈ ಎರಡು ಪರ್ವತ ಶ್ರೇಣಿಗಳು ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತವೆ. ಭಾನುವಾರವಾದ್ದರಿಂದ ಇಲ್ಲಿಗೆ ಭೇಟಿ ನೀಡಿದ್ದ ಸಾವಿರಾರು ಪ್ರವಾಸಿಗರು ಹಿಮವದ್ ಗೋಪಾಲಸ್ವಾಮಿಯ ದರ್ಶನ ಪಡೆದು ಸಂತಸಗೊಂಡರು.
ಇದನ್ನೂ ಓದಿ: ಯಾರೇ ಅಡ್ಡಿ ಬಂದರೂ ಮಹಿಷಾ ದಸರಾ ಮಾಡುತ್ತೇವೆ: ಪ್ರೊ.ಮಹೇಶ್ ಚಂದ್ರಗುರು
ಪ್ರವಾಸಿಗರಿಗೆ ಸ್ವರ್ಗದ ಅನುಭವ: ಜೊತೆಗೆ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಕರ್ನಾಟಕದ ಪ್ರಸಿದ್ಧ ಗಿರಿಧಾಮವಾಗಿದೆ. ಇಲ್ಲಿನ ಹಿಮದ ವಾತಾವರಣ, ವಿಶಾಲ ಹುಲ್ಲುಗಾವಲು, ಶೋಲಾ ಅರಣ್ಯ ಪ್ರವಾಸಿಗರ ಕಣ್ಮನ ಸೆಳೆಯುತ್ತದೆ. ಚಲಿಸುವ ಮೋಡಗಳು, ಜೋರಾಗಿ ಬೀಸುವ ತಂಪು ಗಾಳಿ, ಸುತ್ತಲೂ ಹಿಮ ಆವರಿಸಿರುವುದು ಪ್ರವಾಸಿಗರಿಗೆ ಸ್ವರ್ಗದ ಅನುಭವ ನೀಡುತ್ತಿದೆ. ಮಹಿಳೆಯರಿಗೆ ಉಚಿತ ಬಸ್ ಯೋಜನೆ ಇರುವುದರಿಂದ ಪ್ರವಾಸಿಗರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಜೊತೆಗೆ ಸುಂದರ ಪ್ರವಾಸಿ ತಾಣವಾಗಿರುವ ಬಿಳಿಗಿರಿರಂಗನ ಬೆಟ್ಟಕ್ಕೂ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಹರಿದು ಬಂದ ಪ್ರವಾಸಿಗರ ದಂಡು - ವಿಡಿಯೋ