ಮೈಸೂರು: ಯಂಗ್ ಇಂಡಿಯಾ ಹಾಗೂ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 07 ರಂದು ವಿಚಾರಣೆಗೆ ಹಾಜರಾಗುವಂತೆ ನನಗೆ ಇಡಿ ನೋಟಿಸ್ ನೀಡಿದೆ ಎಂದು ಬದನವಾಳುವಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಕಿರುಕುಳ ನೀಡಿದ ನಂತರ ನನಗೆ ವಿಚಾರಣೆಗೆ ಕರೆದಿದ್ದಾರೆ. ನನ್ನ ಮೇಲೆ ಬೇರೆ ಪ್ರಕರಣಗಳ ಜೊತೆಗೆ ಇದನ್ನೂ ಸೇರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲೂ ಭಾರತ್ ಜೋಡೋ ಯಾತ್ರೆ ಸಮಯದಲ್ಲಿ ನನಗೆ ಹಾಗೂ ನನ್ನ ಸಹೋದರನಿಗೆ ನೋಟಿಸ್ ನೀಡಲಾಗಿದೆ. ನಾನು ವಿಚಾರಣೆಗೆ ಸಹಕಾರ ನೀಡುತ್ತೇನೆ. ಆದರೆ ಅ. 7ರಂದು ರಾಹುಲ್ ಗಾಂಧಿ ಅವರ ಜೊತೆಗೆ ನಮ್ಮ ಸಮಾಜದ ಆದಿ ಚುಂಚನಗಿರಿ ಮಠಕ್ಕೆ ತೆರಳಿ ಸ್ವಾಮೀಜಿಯವರನ್ನು ಭೇಟಿ ಮಾಡುವ ಕಾರ್ಯಕ್ರಮವಿದೆ. ಇದು ಬಹಳ ಮುಖ್ಯ ಕಾರ್ಯಕ್ರಮ. ನಾನು ಮಠದಲ್ಲಿ ಇರಲೇಬೇಕಾದ ಅನಿವಾರ್ಯವಿದೆ. ಈಗಿನ ಪಾದಯಾತ್ರೆ ಹಿನ್ನೆಲೆಯಲ್ಲಿ ಕೆಲ ದಿನಗಳ ಕಾಲಾವಕಾಶ ಕೇಳುತ್ತೇನೆ. ಇಡಿ ಅಧಿಕಾರಿಗಳು ನಮ್ಮ ಪರಿಸ್ಥಿತಿ ಅರಿತು ಸಮ್ಮತಿಸುವ ವಿಶ್ವಾಸವಿದೆ ಎಂದರು.
ನಾಳೆ ಮೈಸೂರು ನಗರದಲ್ಲಿ ಐಕ್ಯತಾ ಯಾತ್ರೆ ಸಂಚರಿಸಲಿದೆ. ಈ ಸಂದರ್ಭದಲ್ಲಿ ಬಿಜೆಪಿ ನಾಯಕರು ಮೈಸೂರಿನಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಲು ಹಂಚಿಕೆ ಮಾಡಿರುವ ಬಾವುಟಗಳ ಬಗ್ಗೆ ಮಾಹಿತಿ ಬಂದಿದೆ. ನಾನು ಪೊಲೀಸ್ ಆಯುಕ್ತರ ಜೊತೆ ಮಾತನಾಡಿದ್ದೇನೆ. ಕಪ್ಪು ಬಾವುಟ, ಮೊಟ್ಟೆ ಕಲ್ಲು, ಧಿಕ್ಕಾರ ಕೂಗುವುದು ಇದನ್ನೆಲ್ಲಾ ಮಾಡಿದರೆ ಅದರ ಫಲವನ್ನು ಅವರೇ ಅನುಭವಿಸಬೇಕಾಗುತ್ತದೆ ಎಂದು ಡಿ.ಕೆ ಶಿವಕುಮಾರ್ ಎಚ್ಚರಿಕೆ ನೀಡಿದರು.
ಸಿ ಟಿ ರವಿಗೆ ಡಿಕೆಶಿ ತಿರುಗೇಟು: ವೇದಿಕೆಯಲ್ಲಿ ಚಾಮರಾಜನಗರ ಘಟನೆ ಸಂಬಂಧ ಕಣ್ಣೀರು ಹಾಕಿರುವುದಕ್ಕೆ ಸಿ.ಟಿ ರವಿ ವ್ಯಂಗ್ಯವಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ನಾನು ಕಣ್ಣೀರು ಹಾಕಿದ್ದಕ್ಕೆ ಅವನು ವ್ಯಂಗ್ಯ ಮಾಡಲಿ. ಅವರಿಗೆ ಹೃದಯ, ಮಾನವೀಯತೆ ಇದ್ದರೆ ತಾನೆ. ಅವರ ಮಂತ್ರಿಗಳು ಆ ಸಂತ್ರಸ್ತ ಕುಟುಂಬದವರನ್ನು ಭೇಟಿ ಮಾಡಿ, ಸಾಂತ್ವನ ಹೇಳಲಿಲ್ಲ. ನಾನು, ಸಿದ್ದರಾಮಯ್ಯನವರು ಬಂದು ಅವರನ್ನು ಭೇಟಿ ಮಾಡಿ ವಿಚಾರಿಸಿದ ನಂತರ 36 ಜನ ಸತ್ತಿರುವ ಮಾಹಿತಿ ಬಹಿರಂಗವಾಯಿತು. ನಂತರ ನ್ಯಾಯಾಲಯದ ಸಮಿತಿ ಕೂಡ ಇದನ್ನು ತಿಳಿಸಿತು. ಬಳಿಕ ನಾನು ಪ್ರತಿ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದೆ. ಅವರ ಪರಿಸ್ಥಿತಿ ನನ್ನ ಮನೆಯಲ್ಲೋ, ನನ್ನ ತಂಗಿ ಮನೆಯಲ್ಲೋ ಅಥವಾ ಸಿ.ಟಿ ರವಿ ಮನೆಯಲ್ಲೋ ಆದರೆ ಏನು ಗತಿ?. ಈ ಪ್ರತಿ ಮನೆಯಲ್ಲಿ ಕುಳಿತು ಮಾತನಾಡಿದ್ದೇನೆ. ಆ ಮಕ್ಕಳು, ತಾಯಂದಿರು ಕಾಣುತ್ತಿದ್ದ ಕನಸು ಏನು ಎಂಬುದು ನಮಗೆ ಗೊತ್ತಿದೆ. ರವಿ ಹಾಗೂ ಬಿಜೆಪಿಯವರಿಗೆ ಕಣ್ಣು, ಹೃದಯ, ಮಾನವೀಯತೆ ಏನೂ ಇಲ್ಲ ಎಂದು ಹರಿಹಾಯ್ದರು.
ಇದನ್ನೂ ಓದಿ: ನೀವು ಕಾಂಗ್ರೆಸ್ನ ರಾಷ್ಟ್ರೀಯ ನಾಯಕರು, ಸ್ವಲ್ಪ ಜ್ಞಾನವಿಟ್ಟುಕೊಂಡು ಮಾತನಾಡಿ: ರವಿಕುಮಾರ್
ರಾಹುಲ್ ಗಾಂಧಿ ಅವರಿಗೆ ಸಿ.ಟಿ ರವಿ ಅವರು ಪ್ರಶ್ನೆ ಮಾಡಿರುವ ಬಗ್ಗೆ ಕೇಳಿದಾಗ, ಹತಾಶನಾದ ರವಿ ನಾಲಿಗೆಗೆ ಮೂಳೆ ಇಲ್ಲ. ಮುಖ್ಯಮಂತ್ರಿ ಮಾತನಾಡಲಿ ನಾವು ಉತ್ತರ ನೀಡುತ್ತೇವೆ. ನಾವು ದಿನನಿತ್ಯ ಅವರ ಪ್ರಣಾಳಿಕೆ ಬಗ್ಗೆ ಕೇಳುತ್ತಿರುವ ಪ್ರಶ್ನೆಗೆ ಅವರು ಉತ್ತರ ನೀಡಲಿ. ನಂತರ ನಾವು ಉತ್ತರ ನೀಡುತ್ತೇವೆ. ಅಸೂಯೆಗೆ ಮದ್ದಿಲ್ಲ. ಈ ದೇಶದ ಜನರು ನಮ್ಮ ಯಾತ್ರೆಗೆ ನೀಡುತ್ತಿರುವ ಬೆಂಬಲವನ್ನು ಕಂಡು ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಎಲ್ಲ ವರ್ಗದ ಜನರ ಪ್ರೀತಿ ವಿಶ್ವಾಸವನ್ನು ಸಹಿಸದೆ ಗಮನ ಬೇರೆಡೆ ಸೆಳೆಯಲು ಅವರು ಪ್ರಯತ್ನಿಸುತ್ತಿದ್ದಾರೆ. ಅವರು ಏನಾದರೂ ಪ್ರಯತ್ನಿಸಲಿ, ಜನ ಅವರಿಗೆ ತಕ್ಕ ಉತ್ತರ ನೀಡುತ್ತಾರೆ ಎಂದು ತಿಳಿಸಿದರು.