ಮೈಸೂರು: ನಾಳೆ ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದಲ್ಲಿ ದಸರಾದ ಉನ್ನತಮಟ್ಟದ ಸಭೆ ವಿಧಾನಸೌಧದಲ್ಲಿ ನಡೆಯಲಿದ್ದು, ಈ ಬಾರಿ ನಾಡಹಬ್ಬ ದಸರಾ ಯಾವ ರೀತಿ ಇರಲಿದೆ ಎಂಬ ಸ್ವರೂಪ ಗೊತ್ತಾಗಲಿದೆ. ಬಹುತೇಕ ಸರಳ ಹಾಗೂ ಸಾಂಪ್ರದಾಯಿಕ ನಾಡಹಬ್ಬ ಆಚರಣೆಗೆ ಒಲವು ವ್ಯಕ್ತವಾಗುವ ಸಾಧ್ಯತೆ ಇದೆ.
ಈ ಬಾರಿಯ ನಾಡ ಹಬ್ಬ ದಸರಾಗೆ ಒಂದು ತಿಂಗಳು ಮಾತ್ರ ಬಾಕಿ ಇದ್ದು, ಈ ಹಿನ್ನೆಲೆ ಸೆಪ್ಟೆಂಬರ್ 3 ರಂದು ನಾಡಹಬ್ಬ ದಸರಾದ ಉನ್ನತಮಟ್ಟದ ಸಭೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆಯಲಿದ್ದು, ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಜಿಲ್ಲಾಧಿಕಾರಿ ಬಗಾದಿ ಗೌತಮ್ ಮೇಯರ್ ಹಾಗೂ ಮೈಸೂರು ಜಿಲ್ಲೆಯ ಉನ್ನತ ಅಧಿಕಾರಿಗಳು ಹಾಗೂ ಎಲ್ಲಾ ಪಕ್ಷದ ಜನಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಆ ನಂತರ ಸೆ. 8 ರಂದು ಮೈಸೂರಿನಲ್ಲಿ ಜಿಲ್ಲಾ ಮಟ್ಟದ ದಸರಾ ಉನ್ನತ ಅಧಿಕಾರಿಗಳ ಸಭೆ ನಡೆದು, ಆ ನಂತರ ಈ ಬಾರಿ ದಸರಾ ಯಾವ ರೀತಿ ಇರುತ್ತದೆ ಎಂಬುದು ಸ್ಪಷ್ಟವಾಗಲಿದೆ.
ಸರಳ ಮತ್ತು ಸಾಂಪ್ರದಾಯಿಕ ದಸರಾಗೆ ಒಲವು:
ಕೊರೊನಾದ ಮೂರನೇ ಅಲೆ ಭೀತಿ ಇರುವುದರಿಂದ ಈ ಬಾರಿ ಸರಳ ಹಾಗೂ ಸಾಂಪ್ರದಾಯಿಕ ದಸರಾ ಮಾಡುವ ಬಗ್ಗೆ ಜನಪ್ರತಿನಿಧಿಗಳು ಚಿಂತಕರು ಹಾಗೂ ತಜ್ಞರು ಈಗಾಗಲೇ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದು, ಸರಳ ಹಾಗೂ ಸಾಂಪ್ರದಾಯಿಕ ದಸರಾವಾದರೆ ಪ್ರವಾಸೋದ್ಯಮಕ್ಕೆ ಪೆಟ್ಟು ಬೀಳಲಿದೆ. ಆದರೂ ಕೊರೊನಾ ಇನ್ನೂ ಸಂಪೂರ್ಣವಾಗಿ ಹೋಗಿಲ್ಲ. ಈಗಾಗಲೇ ಎರಡು ಕೊರೊನಾ ಅಲೆಗಳಿಂದ ಜನ ನೊಂದಿದ್ದಾರೆ. ಇಂತಹ ಸಂದರ್ಭದಲ್ಲಿ ದುಂದುವೆಚ್ಚ ಮಾಡುವುದು ಬೇಡ. ಜೀವನಕ್ಕಿಂತ ಜೀವ ಮುಖ್ಯ. ಆದ್ದರಿಂದ ಈ ಬಾರಿ ದಸರಾ ಸರಳ ಹಾಗೂ ಸಾಂಪ್ರದಾಯಿಕವಾಗಿರಲಿ. ಅದ್ಧೂರಿ ದಸರಾ ಬೇಡ ಎಂಬ ಒಲವು ನಾಳಿನ ಉನ್ನತ ಮಟ್ಟದ ಸಭೆಯಲ್ಲಿ ವ್ಯಕ್ತವಾಗುವ ಎಲ್ಲಾ ಸಾಧ್ಯತೆ ಇದೆ.
ದಸರಾ ಹೇಗಿರುತ್ತೆ:
ಅಕ್ಟೋಬರ್ 7 ರಿಂದ ಅಕ್ಟೋಬರ್ 15 ರವರೆಗೆ ನಾಡಹಬ್ಬ ದಸರಾ ನಡೆಯಲಿದ್ದು, ಕೇವಲ ಒಂದು ತಿಂಗಳು ಮಾತ್ರ ಕಾಲಾವಕಾಶವಿದ್ದು, ಯಾವುದೇ ಪೂರ್ವ ಸಿದ್ಧತೆ ಆರಂಭವಾಗಿಲ್ಲ. ಅರಣ್ಯ ಇಲಾಖೆ 14 ಆನೆಗಳನ್ನು ಗುರ್ತಿಸಿಕೊಂಡಿದ್ದು, ಸರಳ ಹಾಗೂ ಸಾಂಪ್ರದಾಯಿಕ ದಸರಾವಾದರೆ 5 ರಿಂದ 7 ಆನೆಗಳನ್ನು ಕರೆತರಲು ಸಿದ್ಧತೆ ಮಾಡಿಕೊಂಡಿದೆ.
ಹೆಚ್ಚಿನ ಓದಿಗೆ : ಒಂದೇ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ಸಿಪಿವೈ, ಹೆಚ್ಡಿಕೆ, ಡಿ ಕೆ ಸುರೇಶ್..!
ಕೋವಿಡ್ ಆತಂಕವಿರುವುದರಿಂದ ನಾಡ ಹಬ್ಬ ದಸರಾಗೆ ವಿಧ್ಯುಕ್ತ ಚಾಲನೆಯನ್ನು ಚಾಮುಂಡಿ ಬೆಟ್ಟದಲ್ಲಿ ಆಯ್ದ ವ್ಯಕ್ತಿಗಳಿಗೆ ಮಾತ್ರ ಆಹ್ವಾನ ನೀಡಿ ವರ್ಚುವಲ್ ಮೂಲಕ ವೀಕ್ಷಣೆಗೆ ಅವಕಾಶ ಮಾಡಿಕೊಡಲು ಸಿದ್ಧತೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಪ್ರತಿವರ್ಷದಂತೆ ಇರುವ ಗಜಪಯಣ ಈ ವರ್ಷ ಇರುವುದಿಲ್ಲ. ಇನ್ನೂ ಜಂಬೂಸವಾರಿಯ ದಿನ 200 ರಿಂದ 500 ಮಂದಿಗೆ ಮಾತ್ರ ಅವಕಾಶ ಕಲ್ಪಿಸಿ ಉದ್ಘಾಟನೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಮೆರವಣಿಗೆಗಳನ್ನು ಸರಳವಾಗಿ ಮಾಡಲು ಈಗಾಗಲೇ ಜನಪ್ರತಿನಿಧಿಗಳು ತಮ್ಮ ಒಲವನ್ನು ವ್ಯಕ್ತಪಡಿಸಿದ್ದು, ಸರಳ ರೀತಿಯಲ್ಲಿ ವಿದ್ಯುತ್ ಅಲಂಕಾರವನ್ನು ಮಾಡಲು ತಮ್ಮ ಅಭಿಪ್ರಾಯವನ್ನು ನಾಳಿನ ಸಭೆಯಲ್ಲಿ ವ್ಯಕ್ತಪಡಿಸಬಹುದು.
ರಾಜವಂಶಸ್ಥರಿಂದಲೂ ಸರಳ ದಸರಾ:
ರಾಜಪರಂಪರೆಯಲ್ಲಿ ನಡೆಯುವ ಶರನ್ನವರಾತ್ರಿ ದಿನವೂ ಸಹ ಈ ಬಾರಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಅರಮನೆಯ ಒಳಗೆ ನಡೆಯುವ ಸಾಧ್ಯತೆ ಇದೆ. ಧಾರ್ಮಿಕ ಕಾರ್ಯಕ್ರಮವನ್ನು ಸಾಂಪ್ರದಾಯಿಕವಾಗಿ ಮಾತ್ರ ನೆರವೇರಿಸುವ ಸಾಧ್ಯತೆ ಇದೆ. ಸಾರ್ವಜನಿಕರಿಗೆ ಹಾಗೂ ಅರಸು ಕುಟುಂಬಗಳಿಗೂ ಈ ಬಾರಿ ಕೋವಿಡ್ ಹಿನ್ನೆಲೆ ಪ್ರವೇಶ ಇರುವುದಿಲ್ಲ ಎನ್ನಲಾಗ್ತಿದೆ.