ಮೈಸೂರು: ಸುಪ್ರೀಂ ಕೋರ್ಟ್ನಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದ್ದು, ನಂತರ ರಾಜಕೀಯ ಚಿತ್ರಣವೇ ಬದಲಾಗಲಿದೆ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಈಟಿವಿ ಭಾರತ್ಗೆ ಕೊಟ್ಟ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಇಂದಿನಿಂದ ಹುಣಸೂರು ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಈಟಿವಿ ಭಾರತ್ ಜೊತೆ ಮಾತನಾಡಿದ ಅನರ್ಹ ಶಾಸಕ ಹೆಚ್.ವಿಶ್ವನಾಥ್, ಸುಪ್ರೀಂ ಕೋರ್ಟ್ನಲ್ಲಿ ತೀರ್ಪು ನಮ್ಮ ಪರವಾಗಿ ಬರಲಿದೆ. ಆ ನಂತರ ರಾಜಕೀಯ ಸ್ಥಿತಿಯೇ ಬದಲಾವಣೆ ಆಗಲಿದೆ ಎಂದರು. ಹಿಂದೆ ಇದ್ದ ಸ್ಪೀಕರ್ ಕಾನೂನು ವಿರೋಧಿಯಾದ ತಿರ್ಮಾನವನ್ನು ನೀಡಿದ್ದಾರೆ. ಆದ್ರೆ ಇದೆಲ್ಲದರ ವಿರುದ್ಧ ಸುಪ್ರೀಂ ಕೋರ್ಟ್ನಿಂದ ಐತಿಹಾಸಿಕ ತೀರ್ಮಾನ ಬರಲಿದೆ ಎಂದರು.
ನಂತರ ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತಾವೇ ಎಂಬ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಹುಣಸೂರಿಗೆ ಯೋಗೇಶ್ವರ್ ಬಿಜೆಪಿ ಅಭ್ಯರ್ಥಿ ಆಗುವುದಿಲ್ಲ. ಕೆಲವು ಹಿಂಬಾಲಕರು, ಬಾಲಗಳು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದರು.
ದೇವೇಗೌಡರು ಬಿಜೆಪಿ ಪರವಾಗಿ ಇತ್ತೀಚೆಗೆ ಮಾತಾನಾಡುತ್ತಿರುವ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ದೇವೇಗೌಡರು ಮಾತನಾಡಿರುವ ವಿಚಾರದ ಕುರಿತು ನಾನು ವಿಶ್ಲೇಷಣೆ ನೀಡಲ್ಲ. ಅವರಿಗೆ ರಾಜಕೀಯದ ಒಳ ಹೊರಗುಗಳು ತುಂಬಾ ಚೆನ್ನಾಗಿ ತಿಳಿದಿದೆ. ಅವರು ಹೇಳುವುದು ಕೆಲವೊಮ್ಮೆ ಒಳ್ಳೆಯದಾಗಿದೆ ಎಂದರು.