ಮೈಸೂರು: ವಿಶ್ವವಿಖ್ಯಾತ ಜಂಬೂಸವಾರಿಗೆ ಶುಭ ಮೀನ ಲಗ್ನದಲ್ಲಿ ಗಣ್ಯರಿಂದ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು.
ಸರಳ ಹಾಗೂ ಸಾಂಪ್ರದಾಯಿಕ ದಸರಾ-2021 ಕ್ಕೆ ಅರಮನೆ ಮುಂಭಾಗದ ವೇದಿಕೆಯಲ್ಲಿ 5 ರಿಂದ 5.30 ರವರೆಗೆ ಸಲ್ಲುವ ಶುಭಲಗ್ನದಲ್ಲಿ ಜಂಬೂಸವಾರಿಗೆ ಸಿಎಂ ಬಸವರಾಜ ಬೊಮ್ಮಾಯಿ, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಚಿವ ಎಸ್.ಟಿ.ಸೋಮಶೇಖರ್, ಮೇಯರ್ ಸುನಂದಾ ಪಾಲನೇತ್ರ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಪೊಲೀಸ್ ಕಮೀಷನರ್ ಡಾ.ಚಂದ್ರಗುಪ್ತ , ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರು ಶುಭ ಮೀನ ಲಗ್ನದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿ ಇರುವ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡಿ ಜಂಬೂಸವಾರಿಗೆ ಚಾಲನೆ ನೀಡಿದರು.
ಈ ಬಾರಿ ಸರಳ ಜಂಬೂಸವಾರಿ ಆದ್ದರಿಂದ ಅರಮನೆಯೊಳಗೆ ಮಾತ್ರ ಜಂಬೂಸವಾರಿ ಸಾಗಲಿದೆ. ಜಂಬೂಸವಾರಿಯನ್ನು ಅಭಿಮನ್ಯು ಆನೆ ಹೊರಲಿದೆ. ಅಭಿಮನ್ಯುವಿನ ಎಡ ಹಾಗೂ ಬಲದಲ್ಲಿ ಕಾವೇರಿ ಹಾಗೂ ಚೈತ್ರಾ ಆನೆಗಳು ಹೆಜ್ಜೆ ಹಾಕಲಿವೆ.
ಕಲಾತಂಡಗಳ ವಿವರ:
ಈ ಬಾರಿ ಜಂಬೂಸವಾರಿಯಲ್ಲಿ 13 ಕಲಾತಂಡ ಪಾಲ್ಗೊಂಡಿದ್ದು, ಮೆರವಣಿಗೆಯಲ್ಲಿ ನಂದಿಧ್ವಜ ಮೊದಲು ಸಾಗಿತು. ಅದರ ಹಿಂದೆ ವೀರಗಾಸೆ , ನಿಶಾನೆ, ನಂತರ ನೌಪತ್ ಆನೆಗಳು ಹೊರಟವು. ಬಳಿಕ ನಾದಸ್ವರ ಹಾಗೂ ಸ್ಯಾಕ್ಸೋಪೋನ್ ಕಲಾವಿದರು ಪ್ರದರ್ಶನ ನೀಡುತ್ತಾ ಮುಂದೆ ಹೋದರು. ಅವರ ಹಿಂದೆ ವೀರಗಾಸೆ ಕಲಾವಿದರು ಹೆಜ್ಜೆ ಹಾಕಿದರು.
ಆನಂತರ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸ್ತಬ್ಧಚಿತ್ರ, ನಂತರ ಕಂಸಾಳೆ ಕಲಾವಿದರು ಪ್ರದರ್ಶನ ನೀಡುತ್ತಾ ಸಾಗಿದರೆ, ಅದರ ಹಿಂದೆ ಮುಡಾ ಬಹುಮನೆ ಗುಂಪು ವಸತಿ ಸ್ತಬ್ಧಚಿತ್ರ ಸಾಗಿತು. ನಂತರ ಡೊಳ್ಳುಕುಣಿತ ಕಲಾವಿದರು ಸಾಗಿದರೆ ಅದರ ಹಿಂದೆ ಕೋವಿಡ್ ಸ್ತಬ್ಧ ಚಿತ್ರ, ಬಳಿಕ ನಗಾರಿ, ಪೂಜಾ ಕುಣಿತ ಕಲಾವಿದರು ಪ್ರದರ್ಶನ ನೀಡುತ್ತಾ ಮೆರವಣಿಗೆಯಲ್ಲಿ ಸಾಗಿದರು.
ಇವರ ಹಿಂದೆಯೇ ಪರಿಸರ ಪ್ರಾಮುಖ್ಯತೆಯ ಸ್ತಬ್ಧಚಿತ್ರ, ಅದರ ಹಿಂದೆ ಚಿಲಿಪಿಲಿ ಗೊಂಬೆ, ಕೊಂಬು ಕಹಳೆ, ಗಾರುಡಿ ಗೊಂಬೆ, ಕೊಂಬು ಕಹಳೆ, ಗಾರುಡಿ ಗೊಂಬೆ ಸಾಗಿತು. ನಂತರದಲ್ಲಿ ಕೃಷಿ ಇಲಾಖೆಯ ಸ್ತಬ್ಧಚಿತ್ರ, ಚೆಂಡೆವಾದನ ಕಲಾವಿದರು ಪ್ರದರ್ಶನ ನೀಡುತ್ತಾ ಸಾಗಿದರೆ ಆನೆ ಬಂಡಿ ಅವರನ್ನು ಹಿಂಬಾಲಿಸಿತು.. ಕೊನೆಯದಾಗಿ ಯಕ್ಷಗಾನ ಕಲಾವಿದರು ಪ್ರದರ್ಶನ ನೀಡುತ್ತಾ ಮೆರವಣಿಗೆಯಲ್ಲಿ ಸಾಗಿದರು. ಅದರ ಹಿಂದೆ ಪೊಲೀಸ್ ದಳ, ಅಶ್ವ ಪಡೆ, . ಪೊಲೀಸ್ ಬ್ಯಾಂಡ್ ಮೆರವಣಿಗೆಯಲ್ಲಿ ಸಾಗಿತು.
ನಿಗದಿತ ಮುಹೂರ್ತಕ್ಕಿಂತ ಮೊದಲೇ ಪೂಜೆ : ಸಂಜೆ 4:36 ರಿಂದ 4:46ರೊಳಗಿನ ಶುಭ ಮೀನ ಲಗ್ನದಲ್ಲಿ ನಂದಿಧ್ವಜ ಪೂಜೆ ನೆರವೇರಿಸಬೇಕಿತ್ತು. ಆದರೆ, ಇದಕ್ಕೂ ಮೊದಲೇ ಸಿಎಂ ಪೂಜೆ ಸಲ್ಲಿಸಿದ್ದಾರೆ. 4:32ರ ಸುಮಾರಿಗೆ ಪೂಜೆ ನೆರವೇರಲಾಗಿದೆ. ಸಿಎಂಗೆ ಸಚಿವರಾದ ಎಸ್ ಟಿ ಸೋಮಶೇಖರ್ ಸೇರಿದಂತೆ ಇತರರು ಸಾಥ್ ನೀಡಿದರು. ಈ ವೇಳೆ ಜನತೆಗೆ ಸಿಎಂ ಹಾರೈಸಿದರು.