ಮೈಸೂರು: ದಸರಾ ಉದ್ಘಾಟಕರ ಆಯ್ಕೆ ಬಗ್ಗೆ ಯಾವುದೇ ಶಾರ್ಟ್ ಲಿಸ್ಟ್ ಆಗಿಲ್ಲ. ಮುಖ್ಯಮಂತ್ರಿಗಳು ಅಸೆಂಬ್ಲಿಯಲ್ಲಿ ಬ್ಯುಸಿಯಾಗಿದ್ದಾರೆ. ಸೆಪ್ಟೆಂಬರ್ 23ರ ನಂತರ ಪ್ರಮುಖರ ಜೊತೆ ಮಾತನಾಡಿ ಉದ್ಘಾಟಕರ ಹೆಸರು ಅಂತಿಮಗೊಳಿಸಲಾಗುವುದು ಎಂದು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಇಂದು ಅರಮನೆ ಆವರಣದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ದೇಗುಲಗಳ ತೆರವು ಖಂಡಿಸಿ ನಡೆಯುತ್ತಿರುವ ಹೋರಾಟದ ಬಗ್ಗೆ ಪ್ರತಿಕ್ರಿಯಿಸುತ್ತಾ, ಅವರವರ ನೋವನ್ನು ಅವರವರು ತೋಡಿಕೊಳ್ಳುತ್ತಿದ್ದಾರೆ. ಈಗೇನು ತಪ್ಪಾಗಿದೆಯೋ, ಮುಂದೆ ಆ ತಪ್ಪು ಮರುಕಳಿಸದಂತೆ ಸರ್ಕಾರ ಎಚ್ಚೆತ್ತುಕೊಂಡಿದೆ. ತಾತ್ಕಾಲಿಕವಾಗಿ ದೇಗುಲ ತೆರವುಗೊಳಿಸುವುದನ್ನು ನಿಲ್ಲಿಸಲಾಗಿದೆ ಎಂದರು.
ಹುಚ್ಚಗಣಿ ಗ್ರಾಮದಲ್ಲಿ ದೇಗುಲ ತೆರವಿಗೆ ಸಂಬಂಧಿಸಿದಂತೆ ಕಾನೂನು ಉಲ್ಲಂಘನೆಯಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಗಾಗಲೇ ಮುಖ್ಯಮಂತ್ರಿಗಳು ನೋಟಿಸ್ ನೀಡಿದ್ದು, ಅವರ ಉತ್ತರ ಬಂದ ಬಳಿಕ ತೀರ್ಮಾನ ಮಾಡಲಾಗುವುದು. ಘಟನೆಯು ನೇರವಾಗಿ ಸಿಎಂ ಗಮನಕ್ಕೆ ಹೋಗಿರುವುದರಿಂದ ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ದೇಗುಲ ತೆರವು ವಿಚಾರಕ್ಕೆ ಸಂಬಂಧಪಟ್ಟಂತೆ ಶೇಕಡಾ 90ರಷ್ಟು ಸುಪ್ರೀಂಕೋರ್ಟ್ ಆದೇಶ ಪಾಲನೆಯಾಗಿದೆ. ಇನ್ನೆರಡು ದಿನಗಳಲ್ಲಿ ಸಿಎಂ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಸುಪ್ರೀಂಕೋರ್ಟ್ ಆದೇಶ ಹಾಗೂ ಇತ್ತೀಚಿನ ಬೆಳವಣಿಗೆಗಳ ಕುರಿತಂತೆ ಚರ್ಚೆ ಮಾಡಲಾಗುವುದು ಎಂದರು. ಸುಪ್ರೀಂಕೋರ್ಟ್ ಏನು ಮಾಹಿತಿ ಒದಗಿಸಬೇಕು. ಮತ್ತು ದೇವಾಲಯ ತೆರವನ್ನು ನಿಲ್ಲಿಸಲು ಏನು ಕ್ರಮಕೈಗೊಳ್ಳಬೇಕೆಂದು ತೀರ್ಮಾನ ಕೈಗೊಳ್ಳಲಾಗುವುದು. ದೇವಾಲಯ ತೆರವನ್ನು ನಿಲ್ಲಿಸಲು ಕಠಿಣ ಕ್ರಮವನ್ನು ಮುಖ್ಯಮಂತ್ರಿಗಳು ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಪೊಲೀಸ್ ಕಮಿಷನರ್, ಎಸ್ಪಿ, ಡಿಸಿಪಿ ಸೇರಿದಂತೆ ಎಲ್ಲಾ ಪೊಲೀಸ್ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಎಸ್.ಟಿ.ಸೋಮಶೇಖರ್ ತಿಳಿಸಿದರು.