ದಾವಣಗೆರೆ: ಐದು ರೂಪಾಯಿ ಕುರ್‌ಕುರೇ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ಆಗಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊನ್ನೇಬಾಗಿ ಗ್ರಾಮದಲ್ಲಿ ನಡೆದಿದೆ. ಮಾರಾಮಾರಿಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, 10ಕ್ಕೂ ಹೆಚ್ಚು ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶುಕ್ರವಾರದಿಂದ ಆರಂಭವಾದ ಈ ಗಲಾಟೆ ಭಾನುವಾರದ ತನಕ ನಿರಂತರ ನಡೆದಿದ್ದು, ಪೊಲೀಸರ ಮಧ್ಯಪ್ರವೇಶದ ಬಳಿಕ ತಣ್ಣಗಾಗಿದೆ. ಗ್ರಾಮದ ಅತೀಫ್ ಉಲ್ಲಾ ಕುಟುಂಬ ಹಾಗೂ ಸದ್ದಾಂ ಕುಟುಂಬದ ನಡುವೆ ಈ ಮಾರಾಮಾರಿ ನಡೆದಿದ್ದು, ತಮ್ಮನ್ನು ಬಂಧಿಸಲಾಗುತ್ತದೆ ಎಂಬ ಭೀತಿಯಿಂದ ಎರಡೂ ಕಡೆಯಿಂದ 25 ಜನರು ಗ್ರಾಮವನ್ನೇ ತೊರೆದಿದ್ದಾರೆ.
ಅತೀಫ್ ಉಲ್ಲಾ ಕಿರಾಣಿ ಅಂಗಡಿ ನಡೆಸುತ್ತಿದ್ದು, ಅಂಗಡಿಯಲ್ಲಿ ಸದ್ದಾಂ ಕುಟುಂಬದ ಮಕ್ಕಳು ಕುರ್ ಕುರೇ ಖರೀದಿ ಮಾಡಿದ್ದರು. ಅವಧಿ ಮೀರಿದ ಕುರ್ ಕುರೇ ಮಾರಾಟ ಮಾಡಿದ್ದೀಯಾ ಎಂದು ಕೇಳಿದ್ದಕ್ಕೆ ಎರಡು ಕುಟುಂಬಗಳ ನಡುವೆ ಜಗಳ ಶುರುವಾಗಿತ್ತು. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಈ ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಎರಡೂ ಕಡೆಯಿಂದ ಮಾತಿನ ಚಕಮಕಿ ನಡೆದು ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ. ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
'ಹೊನ್ನೇಬಾಗಿ ಗ್ರಾಮದ ರಸ್ತೆ ಬದಿ ಹೋಟೆಲ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದು, ಘಟನೆ ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂಬ ಕಾರಣದಿಂದ ಅತೀಫ್ ಉಲ್ಲಾ ಕುಟುಂಬವು ನಮ್ಮ ಕುಟುಂಬದ ಮೇಲೆ ಹಲ್ಲೆ ನಡೆಸಿದೆ. ಎರಡು ವಾಹನಗಳಲ್ಲಿ ಬಂದ 30ಕ್ಕೂ ಹೆಚ್ಚು ಜನ ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಕೈಗೆ ಸಿಕ್ಕ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಮಹಿಳೆಯರ ಮೇಲೂ ಹಲ್ಲೆ ಮಾಡಿದ್ದಾರೆ' ಎಂದು ಸದ್ದಾಂ ಕುಟುಂಬ ಆರೋಪ ಮಾಡಿದೆ. ಪ್ರತಿಯಾಗಿ ಅತೀಫ್ ಕೂಡ ದೂರು ನೀಡಿದ್ದಾರೆ.
''ಜಗಳದ ಬಳಿಕ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎರಡೂ ಕುಟುಂಬದವರಿಂದ ಕಡೆಯಿಂದ ದೂರು - ಪ್ರತಿದೂರು ದಾಖಲಾಗಿವೆ'' ಎಂದು ಪೊಲೀಸರು ತಿಳಿಸಿದ್ದಾರೆ.
"ಕುರ್ ಕುರೇ ವಿಚಾರವಾಗಿ ಎರಡು ಕುಟುಂಬದ ನಡುವೆ ಗಲಾಟೆಯಾಗಿದೆ. ಈ ಗಲಾಟೆಯಲ್ಲಿ ಇಬ್ಬರು ಕುಟುಂಬದವರು ಹೊಡೆದಾಡಿಕೊಂಡಿದ್ದಾರೆ. ಎರಡೂ ಕುಟುಂಬಗಳು ಹಲ್ಲೆ ಮಾಡಿ ಗಲಾಟೆ ಮಾಡಿದ್ದಾರೆಂದು ಪರಸ್ಪರ ದೂರು ನೀಡಿದ್ದಾರೆ. ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಬಂಧನ ಭೀತಿಯಿಂದ 25ಕ್ಕೂ ಹೆಚ್ಚು ಜನರು ಗ್ರಾಮ ತೊರೆದಿದ್ದು, ಹಲ್ಲೆ ಮಾಡಿದವರನ್ನು ಬಂಧಿಸುವಂತೆ ಎರಡೂ ಕುಟುಂಬಸ್ಥರು ದೂರಿನಲ್ಲಿ ತಿಳಿಸಿದ್ದಾರೆ ಎಂದು ಚನ್ನಗಿರಿ ಪೊಲೀಸ್ ಠಾಣೆಯ ಪಿಐ ಬಾಲಚಂದ್ರ ನಾಯ್ಕ್ ಮಾಹಿತಿ ನೀಡಿದ್ದಾರೆ.