ಬೆಂಗಳೂರು: ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತಿದೆ. ಈ ವೇಳೆ ಅಹಿತಕರ ಘಟನೆಗಳು ಸಂಭವಿಸಿದರೆ ಆಯಕಟ್ಟಿನ ಡಿಸಿಪಿಗಳೇ ಹೊಣೆಗಾರರು ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮುಂಬರುವ ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಎಸಿಪಿ ಮೇಲ್ಪಟ್ಟ ಅಧಿಕಾರಿಗಳೊಂದಿಗೆ ಇಂದು ನಗರ ಪೊಲೀಸ್ ಆಯುಕ್ತ ಕಚೇರಿಯಲ್ಲಿ ಸಭೆ ನಡೆಸಿ ಅವರು ಮಾತನಾಡಿದರು.
ಪ್ರತಿವರ್ಷದಂತೆ ಈ ಬಾರಿಯೂ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗುವುದು. ಸಾರ್ವಜನಿಕರು ಸಂತೋಷದಿಂದ ಹೊಸ ವರ್ಷ ಆಚರಿಸಬೇಕು. ಇದು ಅವರ ಪಾಲಿಗೆ ದುಃಖದ ದಿನವಾಗಬಾರದು. ಈ ದಿಸೆಯಲ್ಲಿ ಕಾನೂನು ಸುವ್ಯವಸ್ಥೆ, ಸಂಚಾರ ದಟ್ಟಣೆ ಹೇಗೆ ನಿಭಾಯಿಸಬೇಕು ಹಾಗೂ ಮಾದಕವಸ್ತು ಮಾರಾಟ, ಸರಬರಾಜು ಹೇಗೆ ಹತ್ತಿಕ್ಕಬೇಕು ಎಂಬುದರ ಬಗ್ಗೆ ಚರ್ಚಿಸಲಾಗಿದೆ. ಆದಾಗ್ಯೂ ಅಹಿತಕರ ಘಟನೆ ನಡೆದರೆ ಆಯಾ ವಿಭಾಗದ ಡಿಸಿಪಿಯೇ ಜವಾಬ್ದಾರರು ಎಂದು ಸಚಿವರು ಎಚ್ಚರಿಸಿದ್ದಾರೆ.
ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಯನ್ನು ಜನರು ಸಂತೋಷದಿಂದ ಆಚರಿಸಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಲಾಗುವುದು. ಬೆಂಗಳೂರಿಗೆ ಬರಲು ಯಾರೂ ಭಯಪಡದಂತೆ ಆಚರಿಸುವ ರೀತಿ ವಾತಾವರಣ ನಿರ್ಮಿಸಬೇಕು ಎಂದರು.
ಆಚರಣೆಗೆ ನಿರ್ಬಂಧವಿಲ್ಲ: ಹೊಸ ವರ್ಷ ದಿನದಂದು ಹೆಚ್ಚು ಜನ ಸೇರುವ ಎಂ.ಜಿ.ರಸ್ತೆ, ಬಿಗ್ರೇಡ್ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್ನಲ್ಲಿ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿಲ್ಲ. ಬದಲಾಗಿ ಜನರನ್ನು ಒಂದು ಕಡೆ ಬಂದು ಇನ್ನೊಂದು ಬದಿಯಲ್ಲಿ ಹೋಗುವ ಹಾಗೆ ಮಾಡಲಾಗಿದೆ. ಸುಮಾರು 7 ಲಕ್ಷ ಜನರು ಬರುವ ಸಾಧ್ಯತೆಯಿದೆ ಎಂದು ಹೇಳಿದರು.
ಪೊಲೀಸರಿಗೆ ರಜೆ ಕೊಡಬೇಡಿ: ಕ್ರಿಸ್ಮಸ್ ಆಚರಣೆ ಹಿನ್ನೆಲೆಯಲ್ಲಿ ಗುಪ್ತದಳ ಇಲಾಖೆಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಬೇಕು. ಮಹಿಳಾ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ಸಣ್ಣ ಪುಟ್ಟ ಅನಾಹುತಗಳೂ ಸಂಭವಿಸದಂತೆ ಎಚ್ಚರಿಕೆ ವಹಿಸಬೇಕಿದೆ. ಹೊಸ ವರ್ಷ ಆಚರಿಸುವವರಿಗೆ ಆಡಚಣೆ ಮಾಡುವುದು ಬೇಡ. ಅವರಿಗೆ ಸುರಕ್ಷತೆ ನೀಡಬೇಕು. ತೊಂದರೆ ಉಂಟು ಮಾಡುವ ಕಿಡಿಗೇಡಿಗಳ ಮೇಲೆ ನಿಗಾವಹಿಸಿ ಕ್ರಮ ಜರುಗಿಸಬೇಕು. ಅಗತ್ಯ ಬಂದೋಬಸ್ತ್ ಹಿನ್ನೆಲೆಯಲ್ಲಿ ನಗರದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ರಜೆ ನೀಡಬಾರದು. ತೀರ ಅಗತ್ಯತೆ ಮತ್ತು ಅನಿವಾರ್ಯತೆ ಇದ್ದವರಿಗೆ ರಜೆ ನೀಡುವಂತೆ ಸಚಿವರು ತಾಕೀತು ಮಾಡಿದರು.
ಇದನ್ನೂ ಓದಿ: ಸಿ.ಟಿ ರವಿ ಫೇಕ್ ಎನ್ಕೌಂಟರ್ ಮಾಡುವ ಉದ್ದೇಶ ಪೊಲೀಸರಿಗೆ ಇತ್ತಾ?: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ