ಮೈಸೂರು: ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ನೀಡಬೇಕಾದ 12.30 ಕೋಟಿ ಸೆಸ್ಅನ್ನು ಮಹಾನಗರ ಪಾಲಿಕೆ ಉಳಿಸಿಕೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ನಗರದ ಜ್ಯೋತಿ ನಗರದಲ್ಲಿರುವ ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ಭಿಕ್ಷಾಟನಾ ನಿಷೇಧ ಅಧಿನಿಯಮಗಳ ಅನ್ವಯ ಮಹಾನಗರ ಪಾಲಿಕೆಯು ಭೂಮಿ ಹಾಗೂ ಕಟ್ಟಡಗಳ ಮೇಲೆ ವಿಧಿಸಲಾಗುವ ಆಸ್ತಿ ತೆರಿಗೆ ಮೇಲೆ ಶೇ. 3ರಷ್ಟು ಸೆಸ್ ವಸೂಲಿ ಮಾಡಲಿದೆ. ಸೆಸ್ ಮೂಲಕ 13 ವರ್ಷಗಳಲ್ಲಿ ಅಂದಾಜು 14 ಕೋಟಿ ಹಣ ಸಂಗ್ರಹವಾಗಿದೆ. ಆದರೆ ಇದುವರೆಗೆ ಪಾವತಿಸಿರುವ ಹಣ ಕೇವಲ 50ರಿಂದ 60 ಲಕ್ಷ ಮಾತ್ರ. ಲೋಕಾಯುಕ್ತದಿಂದ ಸೆಸ್ ಪಾವತಿಸುವಂತೆ ಆದೇಶ ಬಂದರೂ ಪಾಲಿಕೆ ಅಧಿಕಾರಿಗಳು ಕ್ಯಾರೆ ಎಂದಿಲ್ಲ ಎನ್ನಲಾಗಿದೆ.
ತಮ್ಮ ಪಾಲಿಗೆ ಬರಬೇಕಾದ ಸೆಸ್ಗಾಗಿ ನಿರಾಶ್ರಿತರ ಪುನರ್ವಸತಿ ಕೇಂದ್ರದ ಅಧಿಕಾರಿಗಳು ಪರಿತಪಿಸುತ್ತಿದ್ದಾರೆ. ಸೆಸ್ ನೀಡಿದರೆ ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಅನುಕೂಲವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು. ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಡಾ. ಗುರುದತ್ ಹೆಗಡೆ ಮಾತನಾಡಿ, ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಶೀಘ್ರದಲ್ಲೇ ಕರ ಪಾವತಿಸುವುದಾಗಿ ಭರವಸೆ ನೀಡಿದ್ದಾರೆ.