ಮೈಸೂರು: ಅರಮನೆಯಲ್ಲಿ ನಡೆಯುತ್ತಿದ್ದ ಬಾಣ ಬಿರುಸು, ಪಟಾಕಿ ಸಿಡಿತ, ಪೊಲೀಸ್ ಬ್ಯಾಂಡ್, ಸಂಗೀತ ಸೇರಿದಂತೆ ಸಂಭ್ರಮಾಚರಣೆಗಳಿಗೆ ಕೊರೊನಾ ಹಿನ್ನೆಲೆಯಲ್ಲಿ ಬ್ರೇಕ್ ನೀಡಲಾಗುತ್ತಿದೆ.
ಪ್ರತಿವರ್ಷ ಡಿ.31 ರಂದು ಜಿಲ್ಲಾಡಳಿತದ ವತಿಯಿಂದ ಅರಮನೆ ಆವರಣದಲ್ಲಿ ರಾತ್ರಿ 10 ರಿಂದ 12 ರವರೆಗೆ ವಿವಿಧ ಕಾರ್ಯಕ್ರಮ ನಡೆಸಿ 12 ರ ವೇಳೆಗೆ ಬಾಣ ಬಿರುಸು ಪಟಾಕಿಗಳನ್ನು ಸಿಡಿಸಿ, ಸಂಭ್ರಮಾಚರಣೆ ಮಾಡಲಾಗುತ್ತಿತ್ತು. ಆದರೆ, ಕೊರೊನಾ ಹಾವಳಿಯಿಂದ ಎಲ್ಲಾ ಸಂಭ್ರಮಾಚರಣೆಗಳಿಗೆ ಬ್ರೇಕ್ ಕೊಡಲಾಗಿದೆ.
ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಅರಮನೆ ಆಡಳಿತ ಮಂಡಳಿ ಉಪನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ಅವರು, ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಹೊಸವರ್ಷ ಸಂಭ್ರಮಾಚರಣೆ ಮಾಡುತ್ತಿಲ್ಲ. ಕೊರೊನಾ ಕಡಿಮೆಯಾದರೆ ಯುಗಾದಿಗೆ ಸಂಭ್ರಮಾಚರಣೆ ಮಾಡುತ್ತೇವೆ ಎಂದರು.
ಇನ್ನು ನಗರದಾದ್ಯಂತ 144 ಸೆಕ್ಷನ್ ಜಾರಿಯಲ್ಲಿದ್ದು, ಅರಮನೆಯ ಮುಂಭಾಗದಲ್ಲಿ ಹೊಸವರ್ಷ ಆಚರಣೆಗೆ ಅವಕಾಶವಿಲ್ಲ ಎಂದು ಡಿಸಿಪಿ ಡಾ. ಪ್ರಕಾಶ್ ಗೌಡ ಮಾಧ್ಯಮಗಳಿಗೆ ಹೇಳಿಕೆ ನೀಡಿದರು. ಮೈಸೂರಿನಲ್ಲಿ ಹೊಸವರ್ಷ ಆಚರಣೆಯ ಸಂದರ್ಭದಲ್ಲಿ ಎಲ್ಲಾ ಹೋಟೆಲ್ ಮಾಲಿಕರನ್ನು ಕರೆದು ಅವರಿಗೆ ತಿಳುವಳಿಕೆ ನೀಡಲಾಗಿದೆ ಎಂದರು.
ಸರ್ಕಾರ ಏನು ರೂಲ್ಸ್ ಮಾಡುತ್ತದೆ ಅದರಂತೆ ಪಾಲನೆ ಮಾಡಬೇಕು. ಈ ವರ್ಷ ಯಾವುದೇ ವಿಶೇಷವಾದಂತಹ ಯಾವುದೇ ರೀತಿಯ ಕಾರ್ಯಕ್ರಮವನ್ನು ಮಾಡಬಾರದು. ಹೆಚ್ಚು ಜನ ಸಮುದಾಯ ಸೇರಬಾರದು ಹಾಗೂ ಯಾವುದೇ ಡಿಜೆ ಆಗಿರಬಹುದು, ಡ್ಯಾನ್ಸ್ ಆಗಿರಬಹುದು ಮತ್ತಿತರ ಕಾರ್ಯಕ್ರಮಗಳು ಹಾಗೂ ಬಾರ್ ಅಂಡ್ ರೆಸ್ಟೋರೆಂಟ್ಗಳು, ಹೋಟೆಲ್ಗಳು ಮತ್ತು ರೆಸಾರ್ಟ್ಗಳು 11.30ಕ್ಕೆ ಬಂದ್ ಆಗಬೇಕು ಎಂದು ಸೂಚಿಸಲಾಗಿದೆ ಎಂದರು.