ಮೈಸೂರು: ಹಳೆ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಕೊಲೆ ಮಾಡಿದ್ದ ಏಳು ಮಂದಿ ಆರೋಪಿಗಳನ್ನು ಎರಡು ದಿನಗಳಲ್ಲೇ ಪೊಲೀಸರು ಬಂಧಿಸಿದ್ದಾರೆ. ವಿ.ವಿ.ಪುರಂನ ಕಾಳಿದಾಸ ರಸ್ತೆಯಲ್ಲಿರುವ ಟೈಲರ್ ಶಾಪ್ ಬಳಿ ವಿ.ವಿ.ಪುರಂ ನಿವಾಸಿ ಚಂದ್ರು ಎಂಬುವವವರ ಮೇಲೆ ಹಳೆ ದ್ವೇಷದ ಹಿನ್ನೆಲೆ ಮೇ.18ರಂದು ಆರೋಪಿಗಳು ಹತ್ಯೆ ಮಾಡಿದ್ದರು. ಈ ಸಂಬಂಧ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪತ್ತೆಗಾಗಿ ಮೈಸೂರು ನಗರದ ಪೊಲೀಸ್ ಆಯುಕ್ತ ಬಿ.ರಮೇಶ್, ಎನ್ಆರ್ ವಿಭಾಗದ ಎಸಿಪಿ ಅಶ್ವತ್ಥ್ ನಾರಾಯಣ್, ದೇವರಾಜ ವಿಭಾಗದ ಎಸಿಪಿ ಶಾಂತಮಲ್ಲಪ್ಪ, ಸಿಸಿಬಿ ಘಟಕದ ಎಸಿಪಿ ಸಂದೇಶ್ ಕುಮಾರ್ ಹಾಗೂ ಮಂಡಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಯೋಗೇಶ್ ಮತ್ತು ಅಧಿಕಾರಿ, ಸಿಬ್ಬಂದಿಗಳನ್ನೊಳಗೊಂಡ ಪ್ರತ್ಯೇಕ ತಂಡವನ್ನು ರಚಿಸಲಾಗಿತ್ತು. ಈ ತಂಡವು ಮೇ 20ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 7 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಮುತ್ತುರಾಜು, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎಸ್.ಜಾಹ್ನವಿ ಅವರ ಮಾರ್ಗದರ್ಶನದಲ್ಲಿ ರಚಿಸಲಾಗಿದ್ದ ವಿಶೇಷ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೆಂಗಳೂರಿನ ಕುಖ್ಯಾತ ರೌಡಿ ತಮಿಳುನಾಡಿನ ಕಾಡಿನಲ್ಲಿ ಶವವಾಗಿ ಪತ್ತೆ: ಬೆಂಗಳೂರಿನ ಬನಶಂಕರಿ, ಜಯನಗರ ಮತ್ತು ಬೆಂಗಳೂರು ದಕ್ಷಿಣ ಭಾಗಗಳಲ್ಲಿ ಕುಖ್ಯಾತ ರೌಡಿಯಾಗಿದ್ದ ಅಲ್ಯೂಮಿನಿಯಂ ಬಾಬು ತಮಿಳಿನಾಡಿನ ತಳಿ ಕಾಡಿನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಬೆಂಗಳೂರಿನ ಪಾತಕ ಲೋಕದ ಅರಸಯ್ಯ - ಜಲ್ಲಿ ವೆಂಕಟೇಶ್ ಸಿಂಡಿಕೇಟ್ನಲ್ಲಿ ಗುರಗತಿಸಿಕೊಂಡಿದ್ದ ಈತ ಅಲ್ಯೂಮಿನಿಯಂ ಬಾಬು ಎಂದೇ ಕುಖ್ಯಾತಿಯಾಗಿದ್ದ. ಈಗ ಅರಸಯ್ಯ - ಜಲ್ಲಿ ವೆಂಕಟೇಶ್ ಇಲ್ಲವಾಗಿದ್ದರಿಂದ ಇತ್ತೀಚೆಗೆ ಐದಾರು ವರ್ಷಗಳಿಂದ ಕೊತ್ತನೂರು ದಿನ್ನೆಯಲ್ಲಿ ಸಿಮೆಂಟ್ ಹಾಲೋ ಬ್ಲಾಕ್ ಇಟ್ಟಿಗೆ ಕಾರ್ಖಾನೆ ನಡೆಸುತ್ತಿದ್ದ.
ಇಂದು ತಳಿ ಪೊಲೀಸರಿಗೆ ಕಾಡಿನಲ್ಲಿ ಅರೆ ಸುಟ್ಟ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿರುವ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಬೈಕ್ನಲ್ಲಿ ಬಾಬು ಹೋಗುವ ವೇಳೆ ಕಾರಿನಲ್ಲಿ ಹಿಂಬದಿಯಿಂದ ಡಿಕ್ಕಿ ಹೊಡೆದು ಕೊಲೆ ಮಾಡಿ ತಮಿಳುನಾಡಿನ ಕಾಡಿಗೆ ತಂದು ಸುಳಿವು ಸಿಗದಂತೆ ಸುಡಲು ಪ್ರಯತ್ನಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಧಾರವಾಡದಲ್ಲಿ ಪುಂಡರ ಅಟ್ಟಹಾಸ : ಅರೆ ನಗ್ನರಾಗಿ ಬರಬೇಡಿ ಎಂದಿದ್ದಕ್ಕೆ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಆರೋಪ
ಮಗನಿಂದ ಹಲ್ಲೆಗೊಳಗಾಗಿದ್ದ ತಂದೆ ಸಾವು: ಮೊದಲ ಪತ್ನಿಯ ಪುತ್ರ ತನ್ನ ತಂದೆಗೆ ಮರದ ಸಲಾಕೆಯಲ್ಲಿ ಹೊಡೆದು ಗಾಯಗೊಳಿಸಿದ್ದ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ದಕ್ಷಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಮರಮುಡ್ನೂರು ಗ್ರಾಮದಲ್ಲಿ ನಡೆದಿದೆ. ಕುಕ್ಕುಜಡ್ಕದ ದಿ.ಗುರುವ ಎಂಬವರ ಪುತ್ರ ಕಿಟ್ಟು (54) ಮೃತ ವ್ಯಕ್ತಿ. ಹರ್ಷಿತ್ ಕೊಲೆ ಆರೋಪಿ.
ಮೇ 11ರಂದು ಕಿಟ್ಟು ಅವರ ಮನೆಗೆ ಬಂದ ಅವರ ಮೊದಲ ಪತ್ನಿಯ ಮಗ ಹರ್ಷಿತ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಬಳಿಕ ಅಂಗಳದಲ್ಲಿದ್ದ ಅಡಿಕೆ ಮರದ ಸಲಾಕೆಯಿಂದ ಕಿಟ್ಟು ಅವರ ತಲೆಗೆ ಹೊಡೆದು ಗಾಯಗೊಳಿಸಿದ್ದ. ಪರಿಣಾಮ ಕಿಟ್ಟು ಅವರು ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಅವರ ಪುತ್ರ ನಿತ್ಯಾನಂದ ಅವರು ಆ್ಯಂಬುಲೆನ್ಸ್ನಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿದ್ದರು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.