ಮೈಸೂರು: ಅಂಬಾರಿ ಹೊರುವ ಮುನ್ನ ಅರ್ಜುನ ಆನೆಯ ತೂಕ ಪರೀಕ್ಷಿಸಲಾಗಿದ್ದು, ಬರೋಬ್ಬರಿ 240 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾನೆ.
ಇಂದು ಸಂಜೆ ನಗರದಲ್ಲಿ ಅರ್ಜುನ ಸೇರಿದಂತೆ ಐದು ಆನೆಗಳ ತೂಕ ಪರೀಕ್ಷೆ ಮಾಡಲಾಗಿದ್ದು, ಎಲ್ಲಾ ಆನೆಗಳ ತೂಕ ಗಣನೀಯವಾಗಿ ಹೆಚ್ಚಾಗಿದೆ. ಮೈಸೂರಿಗೆ ಮೊದಲ ತಂಡದಲ್ಲಿ ಆಗಮಿಸಿದ್ದ ಐದು ಆನೆಗಳ ತೂಕ ಇಂದು ಮಾಡಲಾಯಿತು. ಅರ್ಜುನನ ತೂಕ ಬಂದಾಗ 5800 ಕೆಜಿ ಇತ್ತು. ಈಗ ಅವನ ತೂಕ 6040 ಕೆಜಿಗೆ ಹೆಚ್ಚಳವಾಗಿದೆ.
ಆಗಸ್ಟ್ 26ಕ್ಕೆ ಆನೆಗಳು ಮೈಸೂರಿಗೆ ಬಂದಿದ್ದು, ಕಳೆದ 40 ದಿನಗಳಿಂದ ತೂಕ ಹೆಚ್ಚಳಕ್ಕೆ ವಿಶೇಷ ಆಹಾರಗಳನ್ನು ನೀಡುತ್ತಾ ಬರಲಾಗಿದೆ. ಎಲ್ಲಾ ಆನೆಗಳು ಆರೋಗ್ಯವಾಗಿದ್ದು, ಅರ್ಜುನ ಕೂಡ ಸದೃಢವಾಗಿದ್ದಾನೆ. ನಾಳೆ ಜಂಬೂ ಸವಾರಿಗೆ ಎಲ್ಲಾ ಆನೆಗಳು ಸಜ್ಜಾಗಿವೆ.
ಆನೆಗಳು ಆರೋಗ್ಯವಂತವಾಗಿರುವ ಕಾರಣಗಳಿಂದಲೇ ತೂಕ ಹೆಚ್ಚಳವಾಗಿದೆ. ಅನಾರೋಗ್ಯ ಪೀಡಿತವಾಗಿದ್ದರೆ ಯಾವ ಕಾರಣಕ್ಕೂ ತೂಕ ಹೆಚ್ಚಳ ಆಗುತ್ತಿರಲಿಲ್ಲ. ಅರಣ್ಯದಿಂದ ಬಂದ ಸಂದರ್ಭ ಆರರಲ್ಲಿ ಒಂದು ಆನೆ ಗರ್ಭಿಣಿಯಾಗಿರುವುದು ಗಮನಕ್ಕೆ ಬಂದ ಹಿನ್ನೆಲೆ ಅದನ್ನು ವಾಪಸ್ ಕಾಡಿಗೆ ಕಳಿಸಿ ಬೇರೆ ಆನೆಯನ್ನು ಕರೆಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆನೆಗಳ ತೂಕ ಎಷ್ಟೆಷ್ಟು ಗೊತ್ತಾ?
- ಅರ್ಜುನ ಹಿಂದೆ ಇದ್ದ ತೂಕ- 5800 ಕೆಜಿ - ಹೆಚ್ಚಳಗೊಂಡ ತೂಕ- 240 ಕೆಜಿ- ಪ್ರಸ್ತುತ- 6040 ಕೆಜಿ
- ಅಭಿಮನ್ಯು ಹಿಂದೆ ಇದ್ದ ತೂಕ- 5745 ಕೆಜಿ - ಹೆಚ್ಚಳಗೊಂಡ ತೂಕ- 325 ಕೆಜಿ- ಪ್ರಸ್ತುತ- 5420 ಕೆಜಿ
- ಈಶ್ವರ ಹಿಂದೆ ಇದ್ದ ತೂಕ- 3995 ಕೆಜಿ - ಹೆಚ್ಚಳಗೊಂಡ ತೂಕ- 275 ಕೆಜಿ - ಪ್ರಸ್ತುತ- 4270 ಕೆಜಿ
- ವಿಜಯಾ ಹಿಂದೆ ಇದ್ದ ತೂಕ- 2825 ಕೆಜಿ - ಹೆಚ್ಚಳಗೊಂಡ ತೂಕ- 95 ಕೆಜಿ - ಪ್ರಸ್ತುತ- 2920 ಕೆಜಿ
- ಧನಂಜಯ ಹಿಂದೆ ಇದ್ದ ತೂಕ- 4460 ಕೆಜಿ - ಹೆಚ್ಚಳಗೊಂಡ ತೂಕ-250 ಕೆಜಿ- ಪ್ರಸ್ತುತ- 4710 ಕೆಜಿ