ಮೈಸೂರು: ಕಳೆದೆರಡು ವರ್ಷಗಳಿಂದ ಕೊರೊನಾದಿಂದ ಜನತೆ ಸಾಕಷ್ಟು ಸಂಕಷ್ಟ ಎದುರಿಸಿದ್ದು, ಇದೀಗ ಕೊಂಚ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ದೇಶದ ಅನೇಕ ಕಡೆ ಕೊರೊನಾ ರೂಪಾಂತರಿ ಒಮಿಕ್ರೋನ್ ವೈರಸ್ ಪತ್ತೆಯಾಗಿದ್ದು, ಆತಂಕ ಸೃಷ್ಟಿ ಮಾಡಿದೆ.
ವಿಶ್ವದಾದ್ಯಂತ ಆತಂಕ ಸೃಷ್ಟಿಸಿರುವ ಒಮಿಕ್ರೋನ್ ಸೋಂಕು ಹರಡದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅಪೋಲೋ ಆಸ್ಪತ್ರೆಯ ವೈದ್ಯ ಸಂಜೀವ್ ರಾವ್ 'ಈಟಿವಿ ಭಾರತ'ದೊಂದಿಗೆ ಕೆಲವು ಮಾಹಿತಿಗಹಳನ್ನು ಹಂಚಿಕೊಂಡಿದ್ದಾರೆ. ಅದರ ಸಂಪೂರ್ಣ ವಿವರ ಹೀಗಿದೆ.
ಒಮಿಕ್ರೋನ್ ಎಂದರೇನು?
ಇದು ಕೊರೊನಾದ ರೂಪಾಂತರಿ ಹೊಸ ತಳಿಯಾಗಿದೆ. ಕೋವಿಡ್ ತನ್ನ ರೂಪವನ್ನು ಬದಲಾಯಿಸಿದಾಗ ಹುಟ್ಟುವ ಹೊಸ ತಳಿಗೆ(ರೂಪಾಂತರಿ ವೈರಸ್ಗೆ) ಗ್ರೀಕ್ ಆಲ್ಪಬೆಟ್ ಪ್ರಕಾರ ಹೊಸ ಹೊಸ ಹೆಸರು ಕೊಡುತ್ತಾ ಹೋಗಲಾಗುತ್ತಿದೆ. ಇದೀಗ ಈ ಹೆಸರು ಇಡಲಾಗಿದೆ. ಈ ವೈರಸ್ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಕಾಣಿಸಿಕೊಂಡಿದೆ.
ಕೊರೊನಾ ಹಾಗೂ ಒಮಿಕ್ರೋನ್ ನಡುವಿನ ವ್ಯತ್ಯಾಸ:
ಹಳೆಯ ಡೆಲ್ಟಾ ಹಾಗೂ ಅಲ್ಫಾ ವೈರಸ್ಗೂ ಇರುವ ವ್ಯತ್ಯಾಸವೆಂದರೆ ಸುಮಾರು 50 ಕಡೆಗಳಲ್ಲಿ ಒಮಿಕ್ರೋನ್ ಬದಲಾವಣೆ ಕಂಡಿದೆ. ಅದರಲ್ಲಿ ಸ್ಪೈಕ್ ಪ್ರೋಟೀನ್ ಕೊರೊನಾ ವೈರಸ್ ದೇಹದೊಳಗೆ ಪ್ರವೇಶಿಸಲು ಮುಖ್ಯ ಕಾರಣ. ಅದರೊಳಗೆ 32 ಬಗೆಯ ಬದಲಾವಣೆಗಳಿವೆ. ಇದರ ಮುಖ್ಯ ತೊಂದರೆಯೆಂದರೆ ಸ್ಪೈಕ್ ಪ್ರೋಟಿನ್ನಲ್ಲಿರುವ ಬದಲಾವಣೆಗಳು ಎಂದು ಮಾಹಿತಿ ನೀಡಿದರು.
ಒಮಿಕ್ರೋನ್ ಗುಣಲಕ್ಷಣಗಳೇನು?
ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಒಮಿಕ್ರೋನ್ ವೈರಾಣು ಕೂಡ ಕೊರೊನಾ ಗುಣ ಲಕ್ಷಣಗಳನ್ನು ಹೊಂದಿದ್ದು, ಇದರೊಂದಿಗೆ ಜ್ವರಕ್ಕಿಂತ ಹೆಚ್ಚು ಸುಸ್ತು, ಕೀಲು ನೋವು, ನಿಶಕ್ತಿ ಕಂಡು ಬರಲಿದೆ. ಆರ್ಟಿಪಿಸಿಆರ್ ಪರೀಕ್ಷೆಯಲ್ಲಿ ವೈರಸ್ ಕಂಡು ಹಿಡಿಯಲು ಸಾಧ್ಯವಿದೆ. ಆದರೆ ಕೊರೊನಾದ ಯಾವ ತಳಿ ಎಂದು ತಿಳಿಯಲು ಜೀನ್ಸ್ ಸೀಕ್ವೆನ್ಸ್ ಮಾಡಬೇಕು. ರೋಗಿಯ ಚಿಕಿತ್ಸೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ. ಆದರೆ ಒಮಿಕ್ರೋನ್ ಶೀಘ್ರವಾಗಿ ಹರಡಲು ಸಾಧ್ಯವಿರುತ್ತದೆ. ಆದ್ದರಿಂದ ಐಸೋಲೇಷನ್ ಬಗ್ಗೆ ಜಾಸ್ತಿ ಒತ್ತು ನೀಡುತ್ತೇವೆ ಎಂದರು.
ಲಸಿಕೆ ಬಗ್ಗೆ ವೈದ್ಯರು ಅಭಿಪ್ರಾಯ:
ಲಸಿಕೆ ತೆಗೆದುಕೊಂಡವರಲ್ಲಿ ಒಮಿಕ್ರೋನ್ ಸೋಂಕಿನ ತೀವ್ರತೆ ಕಡಿಮೆ ಎಂದು ಹೇಳುತ್ತಾರೆ. ಆದರೆ ನಿರ್ಣಾಯಕವಾಗಿ ಯಾವ ಡೇಟಾ ಕೂಡ ಇಲ್ಲ. ವಿಶ್ವದಾದ್ಯಂತ ಇದುವರೆಗೆ 100 ಒಮಿಕ್ರೋನ್ ಪ್ರಕರಣಗಳು ದೃಢಪಟ್ಟಿದೆ. ಒಮಿಕ್ರೋನ್ ಕಂಡು ಬಂದ ದಕ್ಷಿಣ ಆಫ್ರಿಕಾದಲ್ಲಿ ಲಸಿಕೆ ಹಾಕಿಸಿಕೊಂಡವರ ಪ್ರಮಾಣ ತುಂಬಾ ಕಡಿಮೆ ಇದ್ದು, ಶೇ. 65 ರಷ್ಟು ಜನರು ಲಸಿಕೆ ಹಾಕಿಸಿಕೊಂಡಿಲ್ಲ. ಬೇರೆ ಬೇರೆ ರೀತಿಯ ಲಸಿಕೆಗಳಿದ್ದು, ವಿದೇಶಗಳಲ್ಲಿ ಅದರಲ್ಲೂ ಯುಎಸ್, ಯುರೋಪ್ಗಳಲ್ಲಿ ಫೈಜರ್, ಮೊಡೆರ್ನಾ ಲಸಿಕೆ ಬಳಸುತ್ತಿದ್ದು, ಅದು ಪೂರ್ತಿ ಸ್ಪೈಕ್ ಪ್ರೋಟೀನ್ ಆಧಾರಿತವಾಗಿದೆ. ಮೊಡೆರ್ನಾ ಲಸಿಕೆ ಬದಲಾವಣೆ ಮಾಡಬಹುದು ಎಂದು ಹೇಳಲಾಗಿದೆ. ಅದರೊಳಗೆ ಸ್ಪಷ್ಟವಿದೆ.
ಆದರೆ, ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಸ್ಪೈಕ್ ಪ್ರೋಟೀನ್ ಆಧಾರಿತವಲ್ಲ. ಹಾಗಾಗಿ ಯಾವ ಬದಲಾವಣೆ ಆಗುತ್ತದೆ. ಎಷ್ಟರಮಟ್ಟಿಗೆ ಆಗುತ್ತದೆ ಎನ್ನುವುದು ನೋಡಬೇಕು. ಇದುವರೆಗೆ ಒಮಿಕ್ರೋನ್ ಸೋಂಕಿನಿಂದ ಸಾವು ಸಂಭವಿಸಿಲ್ಲ. ಇಲ್ಲಿಯವರೆಗೆ ಇರುವ ಮಾಹಿತಿ ಪ್ರಕಾರ ಸಣ್ಣ ಮಕ್ಕಳಲ್ಲಿ ಅಂದರೆ 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, 20-30 ವರ್ಷದೊಳಗಿನವರಲ್ಲಿ ಜಾಸ್ತಿ ಕಂಡುಬಂದಿದೆ. ಆದರೆ, ಇದು ಆರಂಭಿಕ ಹಂತವಾಗಿದ್ದು, ಹೊರಗಡೆ ಓಡಾಡುವವರು, ಗುಂಪುಗಳಲ್ಲಿರುವವರಲ್ಲಿ ಕಂಡುಬಂದಿದೆ ಎಂದರು.
ಲಸಿಕೆ ಪಡೆಯಿರಿ:
ಒಮಿಕ್ರೋನ್ ಬಗ್ಗೆ ಗಾಬರಿಯಾಗುವ ಅವಶ್ಯಕತೆ ಇಲ್ಲ. ಕೊರೊನಾ ವೈರಸ್ ಹಾಗೂ ಬೇರೆ ಬೇರೆ ತಳಿಗಳನ್ನು ಎದುರಿಸಿದ್ದೇವೆ. ಲಸಿಕೆಯನ್ನು ಎಲ್ಲರೂ ತೆಗೆದುಕೊಳ್ಳಬೇಕು. ಒಂದು ಹಾಗೂ ಎರಡನೇ ಡೋಸ್ ಯಾರು ತೆಗೆದುಕೊಂಡಿಲ್ಲವೋ ಅವರು ಶೀಘ್ರವೇ ತೆಗೆದುಕೊಳ್ಳಿ ಎಂದು ವೈದ್ಯ ಸಲಹೆ ನೀಡಿದರು.
ಸ್ವಯಂ ಔಷಧ ಬೇಡ:
ಒಮಿಕ್ರೋನ್ ಮಾತ್ರವಲ್ಲ ಕೊರೊನಾ, ಡೆಲ್ಟಾ, ಆಲ್ಫಾ ವೈರಸ್ ಬಂದಾಗ ಕೆಲವು ಅನಗತ್ಯ ಔಷಧಗಳಿರುತ್ತದೆ. ಕೆಲವೊಂದರಿಂದ ತೊಂದರೆಗಳು ಜಾಸ್ತಿ ಇರಲಿದೆ. ಎಲ್ಲದಕ್ಕಿಂತ ಮುಖ್ಯ ಎಂದರೆ ಅದನ್ನು ಮಾನಿಟರ್ ಮಾಡಬೇಕು. ಡಿ ರೈಮರ್ ಇನಿಷಿಯಲ್ ಮೊದಲೆರಡು ದಿನ ನಾರ್ಮಲ್ ಇರಲಿದೆ. ಮೂರು ಹಾಗೂ ನಾಲ್ಕನೇ ದಿನ ಅದರ ಹತ್ತು ಪಟ್ಟು ಜಾಸ್ತಿಯಾಗಲಿದೆ.
ಅದು ರಕ್ತ ಹೆಪ್ಪುಗಟ್ಟುವ ಸೂಚಕ. ಈ ರೀತಿಯ ತೊಂದರೆಗಳಿರುತ್ತದೆ. ಹಾಗಾಗಿ ಮೆಡಿಕಲ್ ಗೈಡ್ಲೈನ್ಸ್ನಲ್ಲಿ ಚಿಕಿತ್ಸೆ ಪಡೆಯಬಹುದು. ಆಸ್ಪತ್ರೆಗೆ ದಾಖಲಾಗಬೇಕೆಂದಿಲ್ಲ. ಮನೆಯಲ್ಲೇ ಚಿಕಿತ್ಸೆ ಪಡೆಯಬಹುದು. ಆದರೆ ಸ್ವಯಂ ಔಷಧ ಮಾಡಿಕೊಳ್ಳುವುದು ಬೇಡ. ಲಸಿಕೆ ಬರುವ ಮೊದಲು ಕೊರೊನಾದಿಂದ ನಾವು ರಕ್ಷಿಸಿಕೊಂಡಿದ್ದೆವು. ಅದೇ ರೀತಿ ಈಗಲೂ 3 ಅಡಿ ಅಂತರ, ಮಾಸ್ಕ್ ಧರಿಸುವುದು, ಅನಾವಶ್ಯಕವಾಗಿ ಬರದಿರುವುದು, ಅನಾವಶ್ಯಕವಾಗಿ ಏನನ್ನೂ ಮುಟ್ಟದಿರುವುದು ಈ ನಿಯಮಗಳನ್ನು ಪಾಲಿಸಿ ಎಂದು ಸಲಹೆ ನೀಡಿದರು.
ಲಕ್ಷಣಗಳಿದ್ದರೆ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಿ:
ಸಾರ್ವಜನಿಕರಿಗೆ ಏನಾದರೂ ಲಕ್ಷಣಗಳು ಇದ್ದರೆ ಟೆಸ್ಟ್ ಮಾಡಿಸಿಕೊಳ್ಳಲು ಅಥವಾ ಐಸೋಲೇಷನ್ಗೆ ಹೆದರಿಕೊಳ್ಳಬೇಡಿ. ನೀವು ಐಸೋಲೇಟ್ ಆಗಿಲ್ಲವೆಂದರೆ ನಿಮ್ಮಿಂದ ನಾಲ್ಕರಿಂದ ಹತ್ತು ಜನಕ್ಕೆ ಹರಡಬಹುದು. ಆ ಕಾರಣಕ್ಕಾಗಿ ನಿಮಗೆ ಸಣ್ಣ ಜ್ವರ, ಕೆಮ್ಮು ನೆಗಡಿ, ಸುಸ್ತು, ಕೀಲು ನೋವು ಇದ್ದರೆ ನಿಮ್ಮ ವೈದ್ಯರ ಬಳಿ ಹೋಗಿ ಪರೀಕ್ಷಿಸಿಕೊಳ್ಳಿ, ಹಿಂದೇಟು ಹಾಕಬೇಡಿ ಎಂದು ವೈದ್ಯ ಸಂಜೀವ್ ರಾವ್ ಮನವಿ ಮಾಡಿದರು.