ಮೈಸೂರು: ಆಕ್ಸಿಜನ್ ಕೊರತೆಯಿಂದಾಗಿ ಕೊರೊನಾ ಸೋಂಕಿತನೋರ್ವ ಬಲಿಯಾಗಿದ್ದು, ಖಾಸಗಿ ಆಸ್ಪತ್ರೆಗೆ ಬಿಲ್ ಕಟ್ಟಲಾಗದೆ ಬಡ ಕುಟುಂಬ ಮೃತದೇಹವನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೋಗಿರುವ ಮನಕಲಕುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಮೂಕಳ್ಳಿ ಕಾಲೋನಿಯ ವ್ಯಕ್ತಿ ಉಸಿರಾಟದ ಸಮಸ್ಯೆಯಿಂದ ಮೈಸೂರಿನ ಅರವಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ರೋಗಿಗೆ ಅಳವಡಿಸಿದ್ದ ಆಕ್ಸಿಜನ್ ಖಾಲಿಯಾಗಿದೆ ಎಂದರೂ ಕೇಳದ ವೈದ್ಯರು, ಸ್ವಲ್ಪ ಹೊತ್ತಿನಲ್ಲೇ ಆಕ್ಸಿಜನ್ ಬರುತ್ತೆ ಎಂದು ಸಬೂಬು ಹೇಳುತ್ತಾ ಕಾಲಹರಣ ಮಾಡಿದ್ದಾರೆ. ಇದೇ ಕಾರಣದಿಂದ ನನ್ನ ಪತಿ ಕಣ್ಣೆದುರೇ ಸಾವನ್ನಪ್ಪಿದ್ದಾನೆ ಎಂದು ಮೃತನ ಪತ್ನಿ ಆರೋಪಿಸಿದ್ದಾರೆ.
ಬಡ ಕುಟುಂಬದವರಾದ ಇವರು ಮನೆಯಲ್ಲಿ ದನ, ಕುರಿ ಎಲ್ಲಾ ಮಾರಿ ಈಗಾಗಲೇ 70 ಸಾವಿರ ರೂ. ಕಟ್ಟಿದ್ದಾರೆ. ಇನ್ನೂ ಒಂದು ಲಕ್ಷ ರೂ. ಹಣ ಕೊಡಿ ಎಂದು ಡೆಡ್ ಬಾಡಿ ಕೊಡದೆ ವಿಳಂಬ ಮಾಡುತ್ತಿರುವ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಕುಟುಂಬಸ್ಥರು ಹಿಡಿಶಾಪ ಹಾಕಿದ್ದಾರೆ.