ಮೈಸೂರು: ಚೌಕಿದಾರರ ಹೊಸ ನಾಟಕ ಈ ಚುನಾವಣೆಯಲ್ಲಿ ನಡೆಯುವುದಿಲ್ಲ.ಇವರ ಎಲ್ಲಾ ನಾಟಕಗಳು ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಮುಗಿಯುತ್ತವೆ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಚುನಾವಣಾ ರ್ಯಾಲಿಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬಿಎಸ್ಪಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಸ್ವಾತಂತ್ರ ನಂತರ ತುಂಬಾ ವರ್ಷಗಳ ಕಾಲ ಕಾಂಗ್ರೆಸ್, ಬಿಜೆಪಿ ಹಾಗೂ ಇತರ ಪಕ್ಷಗಳ ಕೈಯಲ್ಲಿ ಕೇಂದ್ರ ಸರ್ಕಾರವಿತ್ತು. ಕಾಂಗ್ರೆಸ್ ಪಕ್ಷದ ಪ್ರಚಾರಗಳು, ನಾಟಕಗಳು ಮುಗಿದಿವೆ. ಇನ್ನು ಬಿಜೆಪಿಯ ಚೌಕಿದಾರ್ ಕತೆ ಕೂಡಾ ಈ ಚುನಾವಣೆಯಲ್ಲಿ ಮುಗಿಯಲಿದೆ. ಚೌಕಿದಾರರ ಹೊಸ ನಾಟಕಗಳು ಈ ಚುನಾವಣೆಯಲ್ಲಿ ನಡೆಯುವುದಿಲ್ಲ ಎಂದರು.
ಕಳೆದ 5 ವರ್ಷಗಳ ಮೋದಿ ಅವಧಿ, ಬರೀ ಘೋಷಣೆಗಳಲ್ಲಿಯೇ ಮುಗಿದಿದೆ. ಇದರಿಂದ ಸಾಮಾನ್ಯ ಜನರಿಗೆ ಯಾವುದೇ ಅನುಕೂಲವಾಗಿಲ್ಲ ಎಂದು ವಾಗ್ದಾಳಿ ನಡೆಸಿದರು. ವಿರೋಧ ಪಕ್ಷದವರನ್ನು ಬೆದರಿಸಲು ಬಿಜೆಪಿ ಆದಾಯ ತೆರಿಗೆ ಇಲಾಖೆಯನ್ನು ಬಳಸಿಕೊಳ್ಳುತ್ತಿದೆ. ದೇಶವನ್ನು ಬಿಜೆಪಿ ಸರ್ಕಾರ ಸುರಕ್ಷಿತವಾಗಿ ಇಟ್ಟಿಲ್ಲ. ದೇಶದ ಭದ್ರತೆ ವಿಚಾರದಲ್ಲೂ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.
ನಾವು ಚುನಾವಣೆ ಪ್ರಣಾಳಿಕೆ ಮೂಲಕ ಸುಳ್ಳು ಹೇಳುವುದಿಲ್ಲ. ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರಿಕ್ಕೆ ಬಂದರೆ ಬಡವರಿಗೆ 6 ಸಾವಿರ ರೂಪಾಯಿ ಹಣ ಕೊಡುವ ಚಿಂತನೆ ಮಾಡಿದ್ದು, ಆ ಮೂಲಕ ಬಡತನ ನಿರ್ಮೂಲನೆಗೆ ಪಣ ತೊಡುವುದಾಗಿ ಹೇಳಿದರು. ಈ ಬಾರಿ ಕರ್ನಾಟಕದಿಂದಲೂ ಬಿಎಸ್ಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.