ಮೈಸೂರು: ರಾಜಕೀಯವಾಗಿ ಮೂಲೆಗುಂಪಾಗಿರುವವರು ತಮ್ಮ ಅಸ್ತಿತ್ವಕ್ಕಾಗಿ ಅಹಿಂದ ಹೋರಾಟದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ವ್ಯಂಗ್ಯವಾಗಿ ಸಿದ್ದರಾಮಯ್ಯ ಹಾಗೂ ಮಹದೇವಪ್ಪ ಅವರ ಬಗ್ಗೆ ಪರೋಕ್ಷವಾಗಿ ಟೀಕಿಸಿದ್ದಾರೆ.
ಇಂದು ಪತ್ರಕರ್ತರ ಭವನದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಈ ಬಜೆಟ್ನಲ್ಲಿ ರಾಜ್ಯಕ್ಕೆ ನೀಡಿರುವ ಕೊಡುಗೆಗಳನ್ನು ವಿವರಿಸಿದರು. ವಿಧಾನಸಭೆ ಚುನಾವಣೆ ಇನ್ನೂ ದೂರ ಇದೆ. ಹಾಗಾಗಿ ಸದ್ಯಕ್ಕೆ ಅಹಿಂದ ಹೋರಾಟ ಅಪ್ರಸ್ತುತ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯರ ಬಗ್ಗೆ ನನಗೆ ವೈಯಕ್ತಿಕವಾಗಿ ವಿಶ್ವಾಸವಿದೆಯೇ ಹೊರತು ರಾಜಕೀಯವಾಗಿ ಅಲ್ಲ. ನಾನು ಅವರ ಜೊತೆ 5 ವರ್ಷ ಶಾಸಕನಾಗಿ ಕೆಲಸ ಮಾಡಿದ್ದೆ ಎಂದರು.
ಈ ಸುದ್ದಿಯನ್ನೂ ಓದಿ: ವೀರಶೈವ ಲಿಂಗಾಯತ ಮಠಾಧೀಶರ ಸಭೆ: ಎಲ್ಲ ಒಳಪಂಗಡಗಳನ್ನು ಒಬಿಸಿಗೆ ಸೇರಿಸುವಂತೆ ಆಗ್ರಹ
ಸತತವಾಗಿ ಅಗತ್ಯವಾದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಕೊರೊನಾದಿಂದ ದೇಶದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಅದನ್ನು ಸರಿಪಡಿಸಲು ಸೆಸ್ ಹಾಕಲಾಗುತ್ತಿದೆ ಎಂದು ಸಮರ್ಥನೆ ನೀಡಿದರು.
ಈ ಬಾರಿ ರಾಜ್ಯ ಬಜೆಟ್ನಲ್ಲಿ ಮೈಸೂರಿಗೆ ಹೆಚ್ಚಿನ ಕೊಡುಗೆ ನೀಡಲು, ಇಂದು ಮೈಸೂರಿಗೆ ಆಗಮಿಸುವ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸುತ್ತೇವೆ ಎಂದರು. ಮೈಸೂರು ಪಾಲಿಕೆಯಲ್ಲಿ ಈ ಬಾರಿ ಮೈತ್ರಿ ಮಾಡಿಕೊಂಡು, ಬಿಜೆಪಿ ಮೇಯರ್ ಸ್ಥಾನ ಪಡೆಯಲು ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರ ಜೊತೆ ಇಲ್ಲಿನ ಸ್ಥಳೀಯ ನಾಯಕರು ಚರ್ಚೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.