ಮೈಸೂರು: ಈ ಬಾರಿ ಮೈಸೂರು ದಸರಾಗೆ ಯಾವುದೇ ಬೆದರಿಕೆ ಇಲ್ಲ. ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡೋಣ ಎಂದು ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಮರ್ ಕುಮಾರ್ ಪಾಂಡೆ ತಿಳಿಸಿದರು.
ಇಂದು ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುವ 11 ಗಜ ಪಡೆ ಹಾಗೂ 25 ಕುದುರೆಗಳಿಗೆ ಫಿರಂಗಿ ತಾಲೀಮು ಕಾರ್ಯಕ್ರಮಕ್ಕೆ ಆಗಮಿಸಿದ ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಮರ್ ಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ ,ಈ ಬಾರಿ ದಸರಾ ಅತ್ಯಂತ ಸಂಭ್ರಮದಿಂದ ಆಚರಣೆ ಆಗುತ್ತದೆ. ಯಾವುದೇ ಬೆದರಿಕೆ ಇಲ್ಲ. ಎಲ್ಲರೂ ಸಂಭ್ರಮದಿಂದ ದಸರಾವನ್ನು ಆಚರಣೆ ಮಾಡೋಣ ಎಂದರು.
ದಸರಾ ಆಚರಣೆಗೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಕೇವಲ ನಗರ ಪೊಲೀಸ್ ಮಾತ್ರವಲ್ಲದೆ, ವಿವಿಧ ರಾಜ್ಯದಿಂದಲೂ ಪೊಲೀಸ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗುತ್ತಿದೆ. ಯಾವುದೇ ತೊಂದರೆ ಇಲ್ಲ. ನಾವು ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇವೆ. ಪ್ರತಿ ವರ್ಷದಂತೆ ಈ ವರ್ಷವು ದಸರಾ ತುಂಬಾ ಚೆನ್ನಾಗಿ ನಡೆಯುತ್ತದೆ. ಎಲ್ಲರ ಪ್ರಾರ್ಥನೆ ಜೊತೆ ನಮ್ಮ ಭರವಸೆಯೂ ಇದೆ ಎಂದು ದಸರಾದಲ್ಲಿ ಭಾಗವಹಿಸುವ ಜನರಿಗೆ ಅಭಯ ನೀಡಿದರು.
ಇಂದು ದಸರಾ ಜಂಬೂ ಸವಾರಿಯ ಸಂದರ್ಭದಲ್ಲಿ 21 ಕುಶಾಲತೋಪು ಹಾರಿಸಿ ಗೌರವ ಕೊಡುವ ಸಂದರ್ಭದಲ್ಲಿ ಹೊರಡಿಸುವ ಶಬ್ದಕ್ಕೆ ಆನೆಗಳು ಹಾಗೂ ಕುದುರೆಗಳು ಹೆದರಬಾರದು ಎಂಬ ಉದ್ದೇಶದಿಂದ ಇಂದು ಫಿರಂಗಿ ತಾಲೀಮು ಮಾಡಲಾಗಿದ್ದು, ಈ ಬಾರಿ ದಸರಾದಲ್ಲಿ ಭಾಗವಹಿಸಲು 3 ಹೊಸ ಆನೆಗಳು ಬಂದಿವೆ. ಇವತ್ತಿನ ತಾಲೀಮು ನೋಡಿ ನನಗೆ ಸಂತೋಷವಾಯಿತು. ನನಗೂ ಇದು ಹೊಸ ಅನುಭವ ಎಂದು ತಮ್ಮ ಸಂತೋಷ ವ್ಯಕ್ತಪಡಿಸಿದರು.