ಮೈಸೂರು: ಅಪ್ರಾಪ್ತನ ಯುವಕನ ಅಡ್ಡಾದಿಡ್ಡಿ ಕಾರು ಚಾಲನೆಯಿಂದ ಗಾಯಗೊಂಡಿದ್ದ ಪತ್ರಿಕೋದ್ಯಮ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾಳೆ.
ನಿನ್ನೆ ಅಪ್ರಾಪ್ತ ಯುವಕ ಕಾರನ್ನು ಅಡ್ಡಾದಿಡ್ಡಿ ಚಾಲನೆ ಮಾಡಿ ಅಶ್ವಿನಿ ಎಂಬ ಯುವತಿಗೆ ಡಿಕ್ಕಿ ಹೊಡೆಸಿದ್ದ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಅಶ್ವಿನಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಾಲಿಸಲಾಗಿತ್ತು. ಆದರೆ, ಕಳೆದ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾಳೆ. ಅಶ್ವಿನಿ ಮಹಾರಾಣಿ ಕಾಲೇಜಿನ ಎರಡನೇ ವರ್ಷದ ಪದವಿಯಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿನಿಯಾಗಿ ವ್ಯಾಸಂಗ ಮಾಡುತ್ತಿದ್ದಳು. ಈಕೆ ಗುಂಡ್ಲುಪೇಟೆ ತಾಲೂಕಿನ ಹುಲ್ಲೇಪುರ ಗ್ರಾಮದ ನಿವಾಸಿಯಾಗಿದ್ದು, ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ನಲ್ಲಿ ವಾಸಿಸುತ್ತಿದ್ದರು.
ನಿನ್ನೆ ಸಿಟಿ ಬಸ್ನಿಂದ ಇಳಿದು ಕಾಲೇಜಿಗೆ ಸ್ನೇಹಿತೆಯೊಂದಿಗೆ ನಡೆದುಕೊಂಡು ಹೋಗುತ್ತಿರುವಾಗ ಅಪ್ರಾಪ್ತ ಬಾಲಕ ಅಡ್ಡಾದಿಡ್ಡಿಯಾಗಿ ಚಾಲನೆ ಮಾಡಿಕೊಂಡು ಬಂದ ಸಂದರ್ಭದಲ್ಲಿ ಅಶ್ವಿನಿಗೆ ಕಾರು ಡಿಕ್ಕಿ ಹೊಡೆದಿದೆ. ಪತ್ರಕರ್ತೆ ಆಗಬೇಕೆಂದು ಬಂದಿದ್ದ ಯುವತಿ ದುರಂತ ಸಾವಿನ ಮೂಲಕ ಬದುಕನ್ನು ಕೊನೆಗೊಳಿಸುವಂತಾಗಿದೆ. ಈ ಘಟನೆ ವಿದ್ಯಾರ್ಥಿನಿ ಕುಟುಂಬವನ್ನ ದುಃಖದ ಮಡಿಲಿಗೆ ದೂಡಿದೆ.