ಮಂಡ್ಯ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮೃತ್ಯುವಿಗೆ ಆಹ್ವಾನ ನೀಡುತ್ತಿದೆ. ಗುತ್ತಿಗೆದಾರರ ಅವೈಜ್ಞಾನಿಕ ಡಿವೈಡರ್ ನಿರ್ಮಾಣದಿಂದ ಅಪಘಾತಗಳು ಹೆಚ್ಚಾಗುತ್ತಿದ್ದರೂ ಪೊಲೀಸ್ ಇಲಾಖೆ ಅವೈಜ್ಞಾನಿಕ ಡಿವೈಡರ್ ಮುಚ್ಚಿಸಲು ಮುಂದಾಗಿಲ್ಲ.
ಮಂಡ್ಯ ಸಮೀಪದ ಉಮ್ಮಡಹಳ್ಳಿ ಗೇಟ್ ಬಳಿ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಗಾಗಿ ಅವೈಜ್ಞಾನಿಕವಾಗಿ ರಸ್ತೆಯ ಸಂಚಾರಕ್ಕೆ ಡಿವೈಡರ್ನ್ನು ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗಿದೆ. ದ್ವಿಪಥ ರಸ್ತೆಯನ್ನು ಏಕ ಪಥ ಮಾಡಲಾಗಿದ್ದು, ಇದರಿಂದ ಬೈಕ್ ಹಾಗೂ ಕಾರು ಚಾಲಕರು ಜೀವವನ್ನು ಕೈಯಲ್ಲಿ ಹಿಡಿದು ಚಾಲನೆ ಮಾಡಬೇಕಾಗಿದೆ. ಕಾಮಗಾರಿ ಸ್ಥಳದಲ್ಲಿ ನಾಲ್ಕು ರಸ್ತೆಗಳು ಸೇರಲಿವೆ. ಯಾವ ಕಡೆಯಿಂದ ವಾಹನಗಳು ಬರುತ್ತವೆ ಎಂಬುದು ಚಾಲಕರಿಗೆ ಗೊಂದಲ ಸೃಷ್ಟಿಯಾಗುತ್ತಿದೆ. ರಸ್ತೆ ಕಾಮಗಾರಿಗಾಗಿ ಬದಲಿ ರಸ್ತೆ ನಿರ್ಮಾಣ ಮಾಡಬೇಕಾದ ಗುತ್ತಿಗೆದಾರರು ಚಾಲಕರ ಹಾಗೂ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಗಾಯಗೊಂಡ ಬೈಕ್ ಸವಾರರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಇನ್ನಾದರೂ ಪೊಲೀಸ್ ಇಲಾಖೆ ಸವಾರರ ಪ್ರಾಣ ರಕ್ಷಣೆಗೆ ಮುಂದಾಬೇಕಾಗಿದೆ. ಮುಂದೆ ನಡೆಯಬಹುದಾದ ಭಾರೀ ಅನಾಹುತ ತಪ್ಪಿಸಿ ಅಮಾಯಕ ಜನರ ಪ್ರಾಣ ರಕ್ಷಣೆ ಮಾಡಬೇಕು ಎಂದು ಜನತೆ ಒತ್ತಾಯ ಮಾಡುತ್ತಿದ್ದಾರೆ.