ಮಂಡ್ಯ: ಬ್ಯಾಗ್‌ನಲ್ಲಿ 10 ಲಕ್ಷ ರೂಪಾಯಿ ಇದೆ, ನಾವಿನ್ನು ಹೊರಡುತ್ತೇವೆ. ಹೊರಗೆ ಹೋಗಿ ಹಣ ಎಣಿಸಿಕೊಳ್ಳಿ ಎಂದವರ ಮಾತು ನಂಬಿ ಕಾರಿಂದ ಕೆಳಗಿಳಿದಾಗ ಕಾದಿತ್ತು ಶಾಕ್!. ಹಣ ಇದೆ ಎನ್ನಲಾದ ಬ್ಯಾಗ್‌ನಲ್ಲಿ ಕೆಳಗಡೆ ನೋಟ್ ಬುಕ್‌ಗಳನ್ನು ತುಂಬಿ ಮೇಲೆ ಮಾತ್ರ 100, 200, 500 ರೂಪಾಯಿ ಮುಖಬೆಲೆಯ ಅಸಲಿ ನೋಟುಗಳನ್ನು ಅಂಟಿಸಲಾಗಿತ್ತು.!
ಹೀಗೆ ಹಣ ಡಬಲ್ ಮಾಡಿಕೊಡಲಾಗುವುದೆಂದು ಪುಸಲಾಯಿಸಿದ ದುಷ್ಕರ್ಮಿಗಳು 5 ಲಕ್ಷ ರೂ. ದೋಚಿಕೊಂಡು ಪರಾರಿಯಾಗಿರುವ ಘಟನೆ ಮಂಗಳವಾರ ಮಧ್ಯಾಹ್ನ ಮದ್ದೂರು ತಾಲೂಕಿನ ಉಪ್ಪಿನಕೆರೆ ಗೇಟ್ ಬಳಿ ನಡೆದಿದೆ. ವಂಚಕರ ಮಾತು ನಂಬಿ ಬಂದ ಕುಣಿಗಲ್ ಮೂಲದ ಪುನೀತ್ ಮತ್ತು ಕಿರಣ್ ಹಣ ಕಳೆದುಕೊಂಡಿದ್ದಾರೆ.
ಘಟನೆಯ ವಿವರ: ಉಪ್ಪಿನಕೆರೆ ಗೇಟ್ ಬಳಿಯ ಶ್ರೀಕಬ್ಬಾಳಮ್ಮ ಟೀ ಸ್ಟಾಲ್ ಹತ್ತಿರ ಮಂಗಳವಾರ ಮಧ್ಯಾಹ್ನ ಸುಮಾರು 12 ಗಂಟೆಗೆ ಪುನೀತ್ ಮತ್ತು ಕಿರಣ್ ಬೈಕ್‌ನಲ್ಲಿ ಬಂದಿದ್ದರು. ಸ್ವಲ್ಪ ಸಮಯದ ನಂತರ ಅದೇ ಸ್ಥಳಕ್ಕೆ ಕೋಲಾರ ಮೂಲದ ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಬಂದಿದ್ದಾರೆ. ನಂತರ ಹಣ ವಿನಿಮಯ ಮಾಡಿಕೊಳ್ಳಲು ನಾಲ್ವರೂ ಕಾರಿನಲ್ಲಿಯೇ ಕುಳಿತು ವ್ಯವಹಾರ ಕುದುರಿಸಲು ಶುರು ಮಾಡಿದ್ದಾರೆ.
ಈ ವೇಳೆ ಪುನೀತ್ ಮತ್ತು ಕಿರಣ್ ಅವರಿಂದ 5 ಲಕ್ಷ ರೂ. ಅಸಲಿ ನೋಟುಗಳಿದ್ದ ಬ್ಯಾಗ್ ಅನ್ನು ಆರೋಪಿಗಳು ಪಡೆದುಕೊಂಡಿದ್ದಾರೆ. ಆದರೆ, ಆರೋಪಿಗಳು ತಂದಿದ್ದ ಬ್ಯಾಗ್‌ನಲ್ಲಿ ಕೆಳಗಡೆ ನೋಟ್ ಬುಕ್‌ಗಳನ್ನು ತುಂಬಿ ಮೇಲುಗಡೆ ಮಾತ್ರ 100, 200, 500 ರೂ. ಮುಖಬೆಲೆಯ ಅಸಲಿ ನೋಟುಗಳನ್ನು ಅಂಟಿಸಿತ್ತು. ಆದರೆ, ಅದರಲ್ಲಿ 10 ಲಕ್ಷ ರೂ. ಇದೆ, ಹೊರಗೆ ಹೋಗಿ ಎಣಿಸಿಕೊಳ್ಳುವಂತೆ ತಿಳಿಸಿ. ಅವರನ್ನು ಕಾರಿನಿಂದ ಕೆಳಗಿಳಿಸಿ 5 ಲಕ್ಷ ರೂಪಾಯಿ ಅಸಲಿ ಹಣದೊಂದಿಗೆ ಮಳವಳ್ಳಿ ಕಡೆಗೆ ಪರಾರಿಯಾಗಿದ್ದಾರೆ. ಕಾರಿನಿಂದ ಕೆಳಗೆ ಇಳಿದು ಹಣ ಎಣಿಸಲು ಮುಂದಾದ ವೇಳೆ ಸತ್ಯಾಂಶ ಗೊತ್ತಾಗಿದೆ.
ಹಣ ಕಳೆದುಕೊಂಡ ವ್ಯಕ್ತಿಗಳು ತಕ್ಷಣವೇ ಮಳವಳ್ಳಿ ಕಡೆಗೆ ಹೋಗುತ್ತಿದ್ದ ಬೇರೊಂದು ಕಾರನ್ನು ಅಡ್ಡಗಟ್ಟಿ ಫಾಲೋ ಮಾಡಿದ್ದಾರೆ. ಆದರೆ, ಕಾರು ತುಂಬ ವೇಗವಾಗಿ ಹೋದ ಕಾರಣ ಆರೋಪಿಗಳು ಕ್ಷಣಾರ್ಧದಲ್ಲೇ ಕಣ್ಮರೆಯಾಗಿದ್ದಾರೆ. ಹಣ ಕಳೆದುಕೊಂಡ ಕಿರಣ್ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಮದ್ದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಯಾಗಿ ಬಲೆ ಬೀಸಲಾಗಿದೆ.
ಇದನ್ನೂ ಓದಿ: 'ಬಿಜೆಪಿ ಮುಖಂಡ ಕಮಲ್ ಪಂತ್‌ಗೆ ಮಾಡಿದ ಅವಮಾನದಿಂದಾಗಿ ಪಿಎಸ್ಐ ಅಕ್ರಮ ಹೊರಬಂತು'