ಮಂಡ್ಯ: ನೀರು ಬೇಡವಾದಾಗ ಚುನಾವಣೆಗಾಗಿ ಸಿಎಂ ಕುಮಾರಸ್ವಾಮಿ ನೀರು ಹರಿಸಿದರು. ಈಗ ಅವಶ್ಯಕತೆ ಇದ್ದರೂ ನೀರು ಬಿಡುತ್ತಿಲ್ಲ ಎಂದು ಸಾಮಾಜಿಕ ಹೋರಾಟಗಾರ ಟಿ.ಜೆ. ಅಬ್ರಾಹಾಂ ವಾಗ್ದಾಳಿ ನಡೆಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಕೆರೆಗಳನ್ನು ತುಂಬಿಸಲು ಬೆಂಗಳೂರಿಗೆ ಬಿಡಬೇಕಾದ ನೀರನ್ನು ನಾಲೆಗಳಿಗೆ ಬಿಟ್ಟರು. ಆಗ ರೈತರ ಮೇಲೆ ಇದ್ದ ಪ್ರೀತಿ ಈಗ ಅವರಿಗೆ ಇಲ್ಲವೇ? ರೈತರ ಪರ ಎನ್ನುತ್ತಿದ್ದವರು ಈಗ ಎಲ್ಲಿ ಹೋದರು? ರೈತರು ನೀರಿಗಾಗಿ ಪರದಾಡುತ್ತಿರುವುದು ಸಿಎಂ ಕುಮಾರಸ್ವಾಮಿ, ನಿಖಿಲ್ ಅವರಿಗೆ ಗೊತ್ತಿಲ್ಲವೇ? ಎಂದು ಪ್ರಶ್ನೆಗಳ ಮಳೆಗೈದಿದ್ದಾರೆ. ಇದೇ ವೇಳೆ ಚುನಾವಣೆ ಸಂದರ್ಭದಲ್ಲಿ ನೀರು ಬಿಡುಗಡೆಗಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರ ಪ್ರತಿಯನ್ನು ಅಬ್ರಾಹಂ ಬಿಡುಗಡೆ ಮಾಡಿದ್ದಾರೆ.
'ಸಿಎಂ ಗ್ರಾಮ ವಾಸ್ತವ್ಯ ದೊಡ್ಡ ಡ್ರಾಮಾ'
ಸಿಎಂ ಗ್ರಾಮ ವಾಸ್ತವ್ಯ ಕುರಿತು ಆಕ್ರೋಶ ವ್ಯಕ್ತಪಡಿಸಿದ ಅಬ್ರಹಾಂ, ಕುಮಾರಸ್ವಾಮಿ ಡ್ರಾಮ ಮಾಡುತ್ತಿದ್ದಾರೆ. ಮಳೆ ಬಂದ ಹಿನ್ನೆಯಲ್ಲಿ ಕಲಬುರಗಿಯಲ್ಲಿ ಸಿಎಂ ವಾಸ್ತವ್ಯ ರದ್ದು ಮಾಡಿದ್ರು. ಮಳೆಯಾದರೇನಂತೆ? ವಾಸ್ತವ್ಯ ಮಾಡಿ ಜನರ ಸಂಕಷ್ಟ ಅರಿಯುವ ಪ್ರಯತ್ನ ಮಾಡಬಹುದಿತ್ತಲ್ಲಾ? ಅವರ ಪ್ರತಿಯೊಂದು ಹೆಜ್ಜೆಯೂ ನಾಟಕ ಎಂದು ಲೇವಡಿ ಮಾಡಿದ್ದಾರೆ.