ಮಂಡ್ಯ: ನಟಿ ಸುಮಲತಾರನ್ನ ಜೆಡಿಎಸ್ಗೆ ಕರೆ ತರುವ ಯತ್ನ ನಡೆದಿತ್ತು ಎಂದು ದೇವೇಗೌಡರ ಸಂಬಂಧಿ ಸಚಿವ ಡಿ.ಸಿ. ತಮ್ಮಣ್ಣ ತಿಳಿಸಿದರು.
ಮದ್ದೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಸೇರಿದ್ದರೆ ಸುಮಲತಾ ಅವರೇ ಅಧಿಕೃತ ಅಭ್ಯರ್ಥಿ ಆಗುತ್ತಿದ್ದರು. ಜೆಡಿಎಸ್ ವರಿಷ್ಠರ ಜೊತೆ ಮಾತುಕತೆಗೂ ನಾನು ಸಮಯ ಕೇಳಿದ್ದ ಎಂದರು.
ಸುಮಲತಾ ಅಂಬರೀಶ್‌ರನ್ನು ಜೆಡಿಎಸ್ ಅಭ್ಯರ್ಥಿ ಮಾಡುವ ಆಸೆ ಇತ್ತು. ನನ್ನ ಸಂಬಂಧಿ ಮಧು ಅವರ ಮೂಲಕ ಮಾಧ್ಯವರ್ತಿಗಳ ನಿವಾಸದಲ್ಲಿ ಸಭೆ ಮಾಡಿ ಸುಮಲತಾ ಮತ್ತು ಸಿಎಂ ಕುಮಾರಸ್ವಾಮಿ ಅವರನ್ನು ವೈಯಕ್ತಿಕವಾಗಿ ಮಾತನಾಡಿಸಲು ಪ್ರಯತ್ನಿಸಿದ್ದೆ. ಆದರೆ ಇಬ್ಬರಿಂದಲೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಸಂಧಾನಕ್ಕೆ ಸುಮಲತಾ ಅವರೇ ಒಪ್ಪಲಿಲ್ಲ ಎಂದು ತಮ್ಮಣ್ಣ ಆರೋಪಿಸಿದರು.
ಹೆಚ್ಡಿಕೆ-ಸುಮಲತಾ ನಡುವೆ ಏನು ನಡೆದಿದೆಯೋ ನನಗೆ ಗೊತ್ತಿಲ್ಲ. ನಾನು ಮತ್ತು ನನ್ನ ಮಗ ಸಕಲ ಪ್ರಯತ್ನ ಮಾಡಿದ್ದೆವು. ಮಧುಸೂಧನ್ ಅವರನ್ನು ಎರಡು ಬಾರಿ ಕರೆಸಿಕೊಂಡು ಮಾತಾನಡಿಸಲು ಪ್ರಯತ್ನಿಸಿದೆ. ಆದರೆ ಭೇಟಿಗೆ ಅವಕಾಶ ಕೊಡಲಿಲ್ಲ. ಹೀಗಾಗಿ ಸಿಎಂ ಹೆಚ್ಡಿಕೆ ಮೇಲೆ ಒತ್ತಡ ಹೇರಲಿಲ್ಲ ಎಂದು ತಮ್ಮಣ್ಣ ಸ್ಪಷ್ಟನೆ ನೀಡಿದರು.
ಅಭ್ಯರ್ಥಿಯಾಗಬೇಕಾದರೆ ಒಲವು ತೋರಿಸದಿದ್ದಾಗ, ನಮ್ಮ ನಾಯಕರನ್ನು ಭೇಟಿ ಮಾಡಲು ಮುಂದಾಗದಿದ್ದಾಗ, ಅಂತ ಅವಶ್ಯಕತೆ ಏನಿದೆ. ಸುಮಲತಾ ಅವರೇ ಸಿಎಂರನ್ನು ಭೇಟಿ ಮಾಡಿ ನಾನು ಕಾಂಗ್ರೆಸ್ ಅಥವಾ ಜೆಡಿಎಸ್ ಅಭ್ಯರ್ಥಿಯಾಗುತ್ತೇನೆ. ತನಗೆ ಬೆಂಬಲ ನೀಡಿ ಎಂದು ಕೇಳಬೇಕಿತ್ತು. ಆದರೆ ಭೇಟಿಯಾಗೋಕೆ ಅವರೇ ಒಪ್ಪಲಿಲ್ಲ ಎಂದು ಸಚಿವರು ದೂರಿದರು.