ಮಂಡ್ಯ: ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಸಕ್ಕರೆನಾಡು ಮಂಡ್ಯದಲ್ಲಿ 55 ದಿನಗಳಿಂದ ರೈತ ಹಿತರಕ್ಷಣಾ ಸಮಿತಿಯಿಂದ ಅನಿರ್ದಿಷ್ಟಾವಧಿ ಧರಣಿ ನಡೆಯುತ್ತಿದೆ. ಪ್ರತಿ ದಿನವೂ ವಿಭಿನ್ನ, ವಿಶಿಷ್ಟವಾದ ಚಳವಳಿಯನ್ನು ರೈತರು ಹಮ್ಮಿಕೊಳ್ಳುವ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ಮುಂದುವರಿಸಿದ್ದಾರೆ.
ನಗರದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರೈತರು ಕಾವೇರಿಗಾಗಿ ಹೋರಾಟ ಮಾಡ್ತಿದ್ದಾರೆ. ಆದ್ರೂ ಸಹ ರೈತರ ಕೂಗು ಸರ್ಕಾರಕ್ಕೆ ಕೇಳಿಸ್ತಿಲ್ಲ. ಧರಣಿಯಲ್ಲಿ ಪ್ರತಿಭಟನಾನಿರತರು ತತ್ವಪದ ಹಾಡುವ ಮೂಲಕ ಇಂದು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು. ರೈತರ ಈ ಹೋರಾಟದಲ್ಲಿ ಭಾಗವಹಿಸುವ ಮೂಲಕ ಮಾಜಿ ಸಚಿವ ಹೆಚ್ ವಿಶ್ವನಾಥ್ ಬೆಂಬಲ ಸೂಚಿಸಿದರು.
ಈ ವೇಳೆ ಮಾತನಾಡಿದ ಅವರು, ಕಾವೇರಿ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಮ್ಮೆಲ್ಲರ ಅನ್ನಬ್ರಹ್ಮ ನಮ್ಮ ರೈತರು. ರಾಜಕಾರಣದ ಮಾತು ಬಿಟ್ಟು ರೈತರ ಸಮಸ್ಯೆ ಬಗೆಹರಿಸಲು ಸರ್ಕಾರ ಮುಂದಾಗಬೇಕು. 55 ದಿನದಿಂದ ರೈತರ ಧರಣಿ ನಡೆಯುತ್ತಿದೆ. ರೈತ ಚಳವಳಿ ಕಾವೇರಿಗಾಗಿ ನಡೆಯುತ್ತಿದೆ. ಕಾವೇರಿ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳುವಲ್ಲಿ ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.
ಕುಡಿಯುವ ನೀರನ್ನಾದ್ರೂ ಉಳಿಸಿಕೊಳ್ಳಲಿ: ಕಾವೇರಿ ನದಿ ನೀರನ್ನು ಕುಡಿಯುವುದಕ್ಕಾದರೂ ಉಳಿಸಿಕೊಳ್ಳಬೇಕು. ಮೈಸೂರು, ಮಂಡ್ಯ, ಬೆಂಗಳೂರು ಸೇರಿ ವಿವಿಧೆಡೆ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಸರ್ಕಾರಗಳು ಅರ್ಥ ಮಾಡಿಕೊಳ್ಳಬೇಕು. ಈಗಿನ ಕಾಂಗ್ರೆಸ್ ಸರ್ಕಾರ ಹಿಂದಿನ ಬಿಜೆಪಿ, ಜೆಡಿಎಸ್ ಸರ್ಕಾರಗಳು ರೈತರನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿವೆ. ನಾನು ಕೂಡ ಒಬ್ಬ ರೈತ. ಸರ್ಕಾರ ಕೂಡಲೇ ರೈತರನ್ನು ಮಾತುಕತೆಗೆ ಕರೆಯಬೇಕು ಎಂದು ಒತ್ತಾಯಿಸಿದರು.
ಮೇಕೆದಾಟು ಆದ್ರೆ ರೈತರಿಗೆ ಅನುಕೂಲ : ಮೇಕೆದಾಟು ಯೋಜನೆ ಆದ್ರೆ ಬಹಳಷ್ಟು ರೀತಿಯಲ್ಲಿ ರೈತರಿಗೆ ಅನುಕೂಲವಾಗುತ್ತದೆ. ಆದರೆ ರಾಜಕೀಯ ಕಾರಣಕ್ಕಗೋಸ್ಕರ ಮೇಕೆದಾಟು ಅಷ್ಟು ಸುಲಭ ಆಗಲ್ಲ. ಕೇಂದ್ರದ ಬಿಜೆಪಿ ಸರ್ಕಾರವು ಮುಂಬರುವ ಲೋಕಸಭೆ ಚುನಾವಣೆ ವೇಳೆ ತಮಿಳುನಾಡಿನಲ್ಲಿ ಹೆಚ್ಚು ಸ್ಥಾನ ಪಡೆಯಬೇಕೆಂದು ಈಗಾಗಲೇ ಓಡಾಡುತ್ತಿದೆ. ಕೇಂದ್ರ ಸರ್ಕಾರ ತಮಿಳುನಾಡಿನ ಪರವಾಗಿ ಇರುತ್ತದೆಯೇ ಹೊರತು, ಕರ್ನಾಟಕ ಪರ ಬರುವುದಿಲ್ಲ ಎಂದು ತಿಳಿಸಿದರು.
ರಾಜ್ಯದ ಜನ 27 ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಆದ್ರೆ ಅವರು ಬಾಯ್ಬಿಟ್ಟಿಲ್ಲ. ಜವಾಬ್ದಾರಿಯುತ ಕೇಂದ್ರವು ಎರಡೂ ರಾಜ್ಯ ಸರ್ಕಾರಗಳ ಜೊತೆ ಒಟ್ಟಿಗೆ ಕುಳಿತು ಸಮಸ್ಯೆ ಬಗೆಹರಿಸಬೇಕು. ಜನರಿಗೆ ಅನ್ನ ಮುಖ್ಯ. ಸಿದ್ದರಾಮಯ್ಯ ಅನ್ನ ಕೊಟ್ಟೆ ಅಂತಾರೆ, ಆದರೆ ಅನ್ನ ಕೊಡುವುದು ಅನ್ನದಾತ. ಸರ್ಕಾರ ಅನ್ನದಾತರ ಸಮಸ್ಯೆ ಕೇಳುತ್ತಿಲ್ಲ. ಸರ್ಕಾರ ಬಹಳ ಜವಾಬ್ದಾರಿಯುತವಾಗಿ ಸಮಸ್ಯೆ ನಿರ್ವಹಿಸಬೇಕು ಎಂದು ಎಚ್ಚರಿಕೆ ರವಾನಿಸಿದರು.
ರಾಜ್ಯ ಸರ್ಕಾರಕ್ಕೆ ಯಾವುದೇ ಗಂಡಾಂತರ ಇಲ್ಲ ಎಂದ ವಿಶ್ವನಾಥ್: ಪ್ರತಿಭಟನೆಯಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ವಿಶ್ವನಾಥ್, ರಾಜ್ಯ ಸರ್ಕಾರಕ್ಕೆ ಏನು ಆಗಲ್ಲ, ಯಾವುದೇ ಗಂಡಾಂತರ ಇಲ್ಲ ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದರು. ರಾಜ್ಯದಲ್ಲಿ ಆಪರೇಷನ್ ಕಮಲ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಯಾವ ಪಾರ್ಟಿಯಲ್ಲಿಯೂ ಇಲ್ಲ, ಇಂಡಿಪೆಂಡೆಂಟ್ ಆಗಿದ್ದೇನೆ. ರಾಜ್ಯಪಾಲರಿಂದ ಸಾಹಿತ್ಯ ವಲಯದಲ್ಲಿ ನಾಮ ನಿರ್ದೇಶಿತನಾಗಿದ್ದೇನೆ. ನಾನು ಪಕ್ಷಗಳ ವಿಚಾರ ಮಾತನಾಡಲ್ಲ, ಜನರ ಪರ ಮಾತನಾಡ್ತೇನೆ. ರಾಜ್ಯ ಸರ್ಕಾರ ತೆಗೆಯುವ ನಡೆ ಸರಿಯಲ್ಲ. ಕರ್ನಾಟಕದ ರಾಜಕಾರಣಿಗಳನ್ನು ಕಂಡು ಜನರು ನಗುತ್ತಿದ್ದಾರೆ ಎಂದರು.
ರಾಜ್ಯದ ಜನತೆಯು ಬಿಜೆಪಿಯ ಭ್ರಷ್ಟಚಾರ, ಸ್ವಜನಪಕ್ಷಪಾತವನ್ನು ಧಿಕ್ಕರಿಸಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತಂದಿದ್ದಾರೆ. ರಾಜ್ಯದಲ್ಲಿರುವ ಸರ್ಕಾರವು ಯಾವುದೋ ಗ್ಯಾರಂಟಿಯಿಂದ ಬಂದಿದ್ದಲ್ಲ. ಗ್ಯಾರಂಟಿ ಇಲ್ಲದಿದ್ದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿತ್ತು. ಅಷ್ಟರ ಮಟ್ಟಿಗೆ ಬಿಜೆಪಿ ಸರ್ಕಾರ ಕೆಟ್ಟೋಗಿತ್ತು. ಈಗ ನಿಮ್ಮ ಜವಾಬ್ದಾರಿ ಏನು, ಮತ್ತೆ ಆಪರೇಷನ್ ಕಮಲ ಮಾಡುತ್ತ ಕುಳಿತುಕೊಳ್ಳುತ್ತೀರಾ ಎಂದು ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಸಿಎಂ ಬದಲಾವಣೆ ಹಾಗೂ ದಲಿತರಿಗೆ ಸಿಎಂ ಪಟ್ಟ ವಿಚಾರವಾಗಿ ಮಾತನಾಡಿದ ವಿಶ್ವನಾಥ್, ದಲಿತರಿಗೆ ಸಿಎಂ ಪಟ್ಟದ ಚರ್ಚೆ ಅನಾವಶ್ಯಕ. ಸರ್ಕಾರ ಬಂದು ಆರು ತಿಂಗಳಾಗಿಲ್ಲ. ನಾವೂ ಅದನ್ನ ಚರ್ಚೆ ಮಾಡೋದು ಬೇಡ ಎಂದ ಅವರು, ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು. ಎನ್ನುತ್ತ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಸರ್ಕಾರವನ್ನು ಕೆಳಗಿಳಿಸಲು ಆಗಲ್ಲ ಎಂದರು.
ಇದನ್ನೂಓದಿ:ಶಾಸಕರು, ಸಚಿವರ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನ: ಸಿಎಂ ಸಿದ್ದರಾಮಯ್ಯ