ಮಂಡ್ಯ: ಸಕ್ಕರೆ ಜಿಲ್ಲೆಯ ಜೀವನಾಡಿ ಕೆಆರ್ಎಸ್ ಅಣೆಕಟ್ಟೆ ಬಳಿ ಸರ್ಕಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ವಿಶ್ವೇಶ್ವರಯ್ಯ ಪುತ್ಥಳಿ ನಿರ್ಮಾಣಕ್ಕೆ ಕಾಮಗಾರಿ ಆರಂಭ ಮಾಡಿದೆ. ಕಾಮಗಾರಿ ಆರಂಭವಾಗುತ್ತಿದ್ದಂತೆ ಸರ್ ಎಂ.ವಿ ಪುತ್ಥಳಿ ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗಿ ಪ್ರತಿಭಟನೆ ನಡೆದಿತ್ತು. ಈ ವಿವಾದ ದೊಡ್ಡದಾಗುವುದಕ್ಕೂ ಮೊದಲೇ ಗೊಂದಲ ನಿವಾರಣೆಗೆ ಸ್ಥಳೀಯ ಶಾಸಕರು ಮುಂದಾಗಿದ್ದಾರೆ.
ಶಾಸಕ ರವೀಂದ್ರ ಶ್ರೀಕಂಠಯ್ಯ ಗೊಂದಲ ನಿವಾರಣೆಗೆ ಪ್ರಯತ್ನ ಮಾಡುತ್ತಿದ್ದಾರೆ. ಪರ ವಿರೋಧದ ಸದಸ್ಯರ ನಡುವೆ ಸಮನ್ವಯ ತಂದು ಯಾರ ಗೌರವಕ್ಕೂ ಚ್ಯುತಿ ಬಾರದ ರೀತಿಯಲ್ಲಿ ಪುತ್ಥಳಿ ನಿರ್ಮಾಣ ಮಾಡಲು ಸೂತ್ರ ರೂಪಿಸಿದ್ದಾರೆ.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ಸುಸಂಸ್ಕೃತ ಕ್ಷೇತ್ರ. ಕಟ್ಟೆ ನಿರ್ಮಾಣಕ್ಕೆ ಎಲ್ಲರ ಕೊಡುಗೆಯೂ ಅಪಾರ. ಯಾರ ಗೌರವಕ್ಕೂ, ವ್ಯಕ್ತಿತ್ವಕ್ಕೂ ಚ್ಯುತಿ ಹಾಗೂ ಧಕ್ಕೆಯಾಗದ ರೀತಿಯಲ್ಲಿ ಪುತ್ಥಳಿ ನಿರ್ಮಾಣ ಮಾಡಲು ಪ್ರಯತ್ನ ಮಾಡಲಾಗುವುದು ಎಂದು ಹೇಳಿದ್ದಾರೆ.