ಮಂಡ್ಯ : ಮನೆಯೂ ಇಲ್ಲದೇ, ಕೊರೊನಾ ಸಂಕಷ್ಟದಲ್ಲಿ ಶಿಕ್ಷಣವೂ ಇಲ್ಲದೇ ಸ್ಲಂ ಮಕ್ಕಳು ಅತಂತ್ರರಾಗಿದ್ದಾರೆ. ಶಿಕ್ಷಣ ಎಲ್ಲ ಮಕ್ಕಳ ಮೂಲ ಹಕ್ಕು ಎನ್ನಲಾಗುತ್ತದೆ. ಆದರೆ, ಹಾಲಹಳ್ಳಿ ಸ್ಲಂ ಮಕ್ಕಳ ಗೋಳು ಕೇಳುವವರೇ ಇಲ್ಲವಾಗಿದ್ದಾರೆ.
ಹಾಲಹಳ್ಳಿ ಸ್ಲಂನಲ್ಲಿ ಸುಮಾರು 600ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಸರ್ಕಾರ ಇನ್ನೂ ಮನೆ ಕಟ್ಟಿಕೊಟ್ಟಿಲ್ಲ ಎಂಬ ಚಿಂತೆ ಒಂದು ಕಡೆಯಾದರೆ, ಮಕ್ಕಳಿಗೆ ಆನ್‌ಲೈನ್ ಶಿಕ್ಷಣವೂ ದೊರಕುತ್ತಿಲ್ಲ ಎಂಬ ನೋವು ಪೋಷಕರನ್ನು ಕಾಡುತ್ತಿದೆ. ಇದರಿಂದ ಮಕ್ಕಳು ನಮ್ಮಂತೆ ಕೂಲಿ ಕಾರ್ಮಿಕರು ಆಗಬೇಕಾ ಎಂಬ ಪ್ರಶ್ನೆ ಪೋಷಕರನ್ನ ಕಾಡುತ್ತಿದೆ.
ಇಲ್ಲಿ ಇರುವ ಎಲ್ಲರೂ ಕೂಲಿ ಕಾರ್ಮಿಕರೇ ಆಗಿದ್ದಾರೆ. ಮಕ್ಕಳು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಚಂದನ ವಾಹಿನ ಪಾಠವೂ ಇಲ್ಲ, ಅತ್ತ ಆನ್‌ಲೈನ್ ಕ್ಲಾಸ್‌ಗೆ ಸ್ಮಾರ್ಟ್ ಫೋನ್ ಇಲ್ಲದೇ ಮಕ್ಕಳು ಕಂಗಾಲಾಗಿದ್ದಾರೆ. ಮಕ್ಕಳಿಗೆ ಇನ್ನಾದರೂ ಶಿಕ್ಷಣದ ವ್ಯವಸ್ಥೆ ಮಾಡಿ ಎಂದು ಪೋಷಕರು ಮನವಿ ಮಾಡುತ್ತಿದ್ದಾರೆ.
ಶಿಕ್ಷಣದಿಂದ ಮಕ್ಕಳು ವಂಚಿತರಾಗಿದ್ದು, ಅಲ್ಲಲ್ಲಿ ಕಾಲ ಕಳೆಯುತ್ತಿದ್ದಾರೆ. ಕೆಲವರು ತಮ್ಮ ಪೋಷಕರಿಗೆ ಸಹಾಯಕರಾಗಿ ಕೂಲಿಗೆ ಹೋಗುತ್ತಿದ್ದಾರೆ. ಸರ್ಕಾರ ಮಾತ್ರ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಎನ್ನುತ್ತಿದೆ.
ಇನ್ನಾದರೂ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಈ ಮಕ್ಕಳ ಭವಿಷ್ಯಕ್ಕಾಗಿ ಒಂದು ನಿರ್ಧಾರ ಪ್ರಕಟ ಮಾಡಬೇಕಾಗಿದೆ. ಇಲ್ಲವಾದರೆ ಈ ಮಕ್ಕಳು ಶಾಲೆಯಿಂದ ದೂರ ಉಳಿಯೋದರಲ್ಲಿ ಅನುಮಾನವೇ ಇಲ್ಲ.