ಮಂಡ್ಯ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಅಲ್ಲಾ ರಾಷ್ಟ್ರದಲ್ಲಿಯೇ ಅತೀ ಹೆಚ್ಚಿನ ಸಾಲ ಮಾಡಿ ಬಿಟ್ಟೋಗಿದ್ದಾರೆ. ಈಗ ಆ ಹೊರೆ ನಮ್ಮೆಲ್ಲರ ತಲೆಯ ಮೇಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಸಿ. ನಾರಾಯಣಗೌಡ ಹೇಳಿದ್ದಾರೆ.
ನಗರಸಭೆ ವತಿಯಿಂದ ವಿವೇಕಾನಂದ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೊಸ ಯೋಜನೆ ಮಾಡಬೇಕೆಂದು ಗೊತ್ತಿದೆ. ಆದರೆ ಕೊರೊನಾ ಮಹಾಮಾರಿಯಿಂದ ಅಭಿವೃದ್ಧಿ ಕುಂಠಿತವಾಗಿದೆ. ಆದರೂ ಸಹ ನಮ್ಮ ಸಿಎಂ ಧೈರ್ಯದಿಂದ ನಮ್ಮೆಲ್ಲರಿಗೆ ಶಕ್ತಿ ತುಂಬಿದ್ದಾರೆ ಎಂದರು.
ಅಭಿವೃದ್ಧಿಗೆ ನಮ್ಮ ಮುಖ್ಯಮಂತ್ರಿ ಮುಂದಾಳತ್ವ ವಹಿಸಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರ ಸಾಲ ತೆಗೆದುಕೊಳ್ಳುವ ಮಟ್ಟದಲ್ಲಿ ನಮ್ಮ ಮಾಜಿ ಸಿಎಂ ಸಿದ್ದರಾಮಯ್ಯ ಬಿಟ್ಟೋಗಿಲ್ಲ. ಅವರು ಅದನ್ನ ಆರ್ಥ ಮಾಡಿಕೊಳ್ಳಬೇಕು. ಈ ವೇಳೆ ಅವರು ಸಿಎಂ ಆಗಿದ್ದರೆ ನಿಜವಾದ ಪರಿಸ್ಥಿತಿ ಅರ್ಥ ಆಗ್ತಿತ್ತು. ಅದರ ಬಗ್ಗೆ ಟೀಕೆ-ಟಿಪ್ಪಣಿ ಬ್ಯಾಡ, ಅವರು ದೊಡ್ಡವರು ಎಂದು ವ್ಯಂಗ್ಯವಾಡಿದರು.
ಓದಿ:ಸಿದ್ದರಾಮಯ್ಯ ಯಾವಾಗ ಜ್ಯೋತಿಷಿಗಳಾದರೋ ಗೊತ್ತಿಲ್ಲ.. ಸಚಿವ ಬೈರತಿ ಬಸವರಾಜ್
ಸರ್ಕಾರವನ್ನ ಯಾವ ಮಟ್ಟಕ್ಕೆ ನಮ್ಮ ಮುಖ್ಯಮಂತ್ರಿಗಳು ತೆಗೆದುಕೊಂಡು ಹೋಗ್ತಾರೆ ಅನ್ನೋದನ್ನು ಮಾಜಿ ಸಿಎಂ ಸಿದ್ದರಾಮಯ್ಯ ನೋಡಲಿ. ಸಚಿವ ಸಂಪುಟ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಇದು ದೊಡ್ಡವರಿಗೆ ಬಿಟ್ಟಿದ್ದು. ಸಂಪುಟ ವಿಚಾರವಾಗಿ ನನಗೆ ಯಾವುದೇ ಬೇಸರವಿಲ್ಲ. ನನ್ನ ಜೊತೆ ಬಂದವರಿಗೂ ಸಿಗಲಿ. ಮೈಶುಗರ್ ಸಕ್ಕರೆ ಕಾರ್ಖಾನೆ ಆರಂಭ ವಿಚಾರವಾಗಿ ಮಾತನಾಡಿ, ಶೀಘ್ರದಲ್ಲೇ ಆರಂಭವಾಗುತ್ತದೆ. ನಾಳೆ ಕ್ಯಾಬಿನೆಟ್ ಸಭೆ ಇದೆ. ಅದರಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತೆ ಎಂದು ತಿಳಿಸಿದರು.
ಹೊಸ ಸಕ್ಕರೆ ಕಾರ್ಖಾನೆ ಪ್ರಾರಂಭಿಸುತ್ತಿದ್ದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿಯವರು ಯಾಕೆ ಈವರೆಗೆ ಮಾಡಿರಲಿಲ್ಲ? ರೈತರ ಪರ ಯಾಕೆ ಯೋಚನೆ ಮಾಡಿಲ್ಲ? ಎಂದು ಸಚಿವ ನಾರಾಯಣಗೌಡ ಪ್ರಶ್ನಿಸಿದರು.