ಮಂಡ್ಯ: ಅದು ಸ್ವಾತಂತ್ರ್ಯ ಚಳವಳಿಗೆ ಸ್ಫೂರ್ತಿ, ಚೈತನ್ಯ ತುಂಬಿದ ಜಾಗ. ಆ ಜಾಗದಲ್ಲೇ ಅಂದಿನ ಮೈಸೂರು ಕಾಂಗ್ರೆಸ್ ಮೊದಲು ತ್ರಿವರ್ಣ ಧ್ವಜ ಹಾರಿಸಿದ್ದು. ಇಂದಿಗೂ ಆ ಜಾಗದಲ್ಲಿ ನಿಂತು ಅಂದಿನ ಸ್ವಾತಂತ್ರ್ಯ ಹೋರಾಟದ ವಿಚಾರ ಕೇಳಿದ್ರೆ ಒಮ್ಮೆ ಮೈ ಜುಮ್ ಎನಿಸುತ್ತೆ.
ಹೌದು, ಮದ್ದೂರು ತಾಲೂಕಿನ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಧ್ವಜ ಸತ್ಯಾಗ್ರಹ ಸೌಧವೇ ‘ಹೋರಾಟದ ಹೆಗ್ಗುರುತು’. ಇಲ್ಲಿ 1938ರ ಏಪ್ರಿಲ್ 10 ರಿಂದ ಮೂರು ದಿನ ನಡೆದ ಚಳವಳಿ ರಾಜ್ಯದ ಜನ ಸಾಮಾನ್ಯರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚುವಲ್ಲಿ ಯಶಸ್ವಿಯಾಗುವ ಮೂಲಕ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ಉಳಿದಿದೆ.
ನಿಷೇಧ ಉಲ್ಲಂಘಿಸಿ ಧ್ವಜಾರೋಹಣ:
ಶಿವಪುರದ ಶಿಂಷಾ ನದಿ ದಂಡೆಯ ಮೇಲೆ ಮೈಸೂರು ಕಾಂಗ್ರೆಸ್ ಮೊದಲನೇ ಸಮಾವೇಶ ನಡೆಸಲು ಹೋರಾಟಗಾರರು ಯೋಜನೆ ರೂಪಿಸಿದರು. ಧ್ವಜಾರೋಹಣ ಹಾಗೂ ಧ್ವಜವಂದನ ಕಾರ್ಯಕ್ರಮ ಏರ್ಪಾಟಾಯಿತು. ಆದರೆ ಕಾಂಗ್ರೆಸ್ ಧ್ವಜ ಹಾರಿಸುವುದರಿಂದ ಮೈಸೂರು ಮಹಾರಾಜರ ಪ್ರಭುತ್ವಕ್ಕೆ ಕುಂದು ಬರುವುದೆಂದು ಭಾವಿಸಿ ಮೈಸೂರು ಜಿಲ್ಲಾ ದಂಡಾಧಿಕಾರಿ ಧ್ವಜಾರೋಹಣ ಕಾರ್ಯಕ್ರಮಕ್ಕೆ ನಿಷೇಧ ಹೇರಿದ್ದರು. ಆದರೆ ನಿಷೇಧ ಉಲ್ಲಂಘಿಸಿ ಧ್ವಜಾರೋಹಣ ನೆರವೇರಿಸಲಾಯಿತು. ಆ ಮೂಲಕ ಸ್ವಾತಂತ್ರ್ಯ ಚಳವಳಿಯ ಕಿಚ್ಚಿಗೆ ಶಿವಪುರ ಸಾಕ್ಷಿಯಾಯಿತು.
ಇದನ್ನೂ ಓದಿ:'ಆಜಾದಿ ಕಾ ಅಮೃತ್ ಮಹೋತ್ಸವ'.. ಕಾರವಾರ ನೌಕಾನೆಲೆ ನಿರ್ಬಂಧಿತ ದ್ವೀಪದಲ್ಲಿ ಹಾರಾಡಿತು ತ್ರಿವರ್ಣ ಧ್ವಜ
ಈ ಹೋರಾಟದಲ್ಲಿ ಸಿದ್ದಲಿಂಗಯ್ಯ, ಎಚ್.ಕೆ. ವೀರಣ್ಣಗೌಡ, ಸಾಹುಕಾರ್ ಚೆನ್ನಯ್ಯ, ಮಂಡ್ಯದ ಗೋಪಾಲಶೆಟ್ರು, ಎಂ.ಜಿ. ಬಂಡಿಗೌಡರು, ಎಚ್.ಸಿ. ದಾಸಪ್ಪ, ಎಸ್. ರಂಗಯ್ಯ ಸೇರಿದಂತೆ ಹಲವಾರು ಹೋರಾಟಗಾರರು ಪಾಲ್ಗೊಂಡಿದ್ದರು. ಆದ್ರೆ ಧ್ವಜ ಸತ್ಯಾಗ್ರಹ ನಡೆದು 36 ವರ್ಷಗಳ ಕಳೆದರೂ ಸಹ ಸ್ಮಾರಕ ಸೌಧ ನಿರ್ಮಿಸುವ ಚಿಂತನೆ ಮಾಡಿರಲ್ಲಿಲ್ಲ.
ಧ್ವಜ ಸತ್ಯಾಗ್ರಹ ಸೌಧ ನಿರ್ಮಾಣ:
ನಂತರ ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯ ಅವರು ಧ್ವಜ ಸತ್ಯಾಗ್ರಹ ಸ್ಮಾರಕ ನಿರ್ಮಾಣದ ಚಿಂತನೆ ಮಾಡುವ ಮೂಲಕ ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರಲ್ಲದೇ 1979ರ ಸೆಪ್ಟೆಂಬರ್ 29 ರಂದು ಸತ್ಯಾಗ್ರಹಸೌಧ ಉದ್ಘಾಟನೆ ಮಾಡಿದರು.
ಸೂಕ್ತ ನಿರ್ವಹಣೆ ಆಗಬೇಕಿದೆ:
ಅಂದು ಹೋರಾಟ ನಡೆಸಿದ ನಾಯಕರ ಸ್ಮರಣಾರ್ಥವಾಗಿ ಹಾಗೂ ಹೋರಾಟದ ಕಿಚ್ಚಿನ ನೆನಪಿಗಾಗಿ ಕಟ್ಟಿದ ಧ್ವಜ ಸತ್ಯಾಗ್ರಹ ಇಂದು ಸರಿಯಾದ ನಿರ್ವಹಣೆ ಇಲ್ಲದೇ ಹಾಳಾಗಿರುವುದು ಸ್ಥಳೀಯರಲ್ಲಿ ಬೇಸರ ತರಿಸಿದೆ. ಕಟ್ಟಡದ ನಿರ್ವಹಣೆ ಮಾಡಬೇಕಿದ್ದ ಅಧಿಕಾರಿ ವರ್ಗದ ಬೇಜವಾಬ್ದಾರಿಯಿಂದಾಗಿ ಕಟ್ಟಡದ ಮೇಲೆ ಗಿಡಗಳು ಬೆಳೆದುನಿಂತಿವೆ. ಅಲ್ಲದೇ ಸತ್ಯಾಗ್ರಹ ಸೌಧದ ಗಾಜುಗಳು ಸಹ ಪುಡಿ ಪುಡಿಯಾಗ್ತಿವೆ ಎಂದು ಆರೋಪಿಸಿರುವ ಸ್ಥಳೀಯರು ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುವ ಮೂಲಕ ಮಹಾನ್ ನಾಯಕರು ಹೋರಾಟ ಮಾಡಿದ ಸ್ಥಳಗಳನ್ನು ಉಳಿಸುವತ್ತ ಆಲೋಚನೆ ಮಾಡಬೇಕಿದೆ.