ಮಂಡ್ಯ: ಮಳವಳ್ಳಿ ತಾಲೂಕಿನ ಪಂಡಿತಹಳ್ಳಿ ಸಮೀಪ ಫೆ. 9ರಂದು ರಸ್ತೆ ಬದಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಕೊಳ್ಳೇಗಾಲ ಮೂಲದ ಸಲೀಂ(40) ಕೊಲೆ ಪ್ರಕರಣ ತಿರುವು ಪಡೆದಿದೆ. ಜಿಲ್ಲೆಯ ಮಾಜಿ ಶಾಸಕರೊಬ್ಬರ ಪುತ್ರನ ಕೈವಾಡದ ಶಂಕೆ ವ್ಯಕ್ತವಾಗಿದೆ. ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸ್ ಅಧಿಕಾರಿಯೊಬ್ಬರು ಹುನ್ನಾರ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಸಹ ಕೇಳಿಬಂದಿದೆ.
ರೈಸ್ ಪುಲ್ಲಿಂಗ್ ವಿಷಯವಾಗಿ ಈಗಾಗಲೇ ರಾಜ್ಯದ ಹಲವು ಅಪರಾಧ ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಇದೇ ವಿಚಾರವಾಗಿಯೇ ಸಲೀಂ ಕೊಲೆ ನಡೆದಿದೆ ಎನ್ನಲಾಗಿದೆ. ಇದರಲ್ಲಿ ಮಾಜಿ ಶಾಸಕರ ಪುತ್ರನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಆದರೆ ಪೊಲೀಸ್ ಇಲಾಖೆ ಇದನ್ನು ಖಚಿತಪಡಿಸಿಲ್ಲ.
ಇದನ್ನೂ ಓದಿ: ಮುಂದಿನ 24 ಗಂಟೆ ನಮಗೆ ನಿರ್ಣಾಯಕ: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್
ಘಟನೆಯ ವಿವರ: ಸಲೀಂ ತನ್ನ ಬಳಿ ತಾಮ್ರದ ಚೊಂಬು (ರೈಸ್ ಪುಲ್ಲಿಂಗ್) ಇರುವುದಾಗಿ ಹೇಳಿ ಮಾಜಿ ಶಾಸಕರ ಪುತ್ರನೊಡನೆ 50 ಲಕ್ಷ ರೂ.ಗೆ ವ್ಯವಹಾರ ಕುದುರಿಸಿ 5 ಲಕ್ಷ ರೂ. ಮುಂಗಡ ಪಡೆದಿದ್ದ. ಫೆ. 7ರಂದು ಮಾಜಿ ಶಾಸಕರ ಪುತ್ರ ಸಲೀಂನನ್ನು ಮೈಸೂರಿನ ಇಲವಾಲ ಸಮೀಪಕ್ಕೆ ಕರೆಸಿದ್ದರೆನ್ನಲಾಗಿದೆ. ಆ ವೇಳೆ ರೈಸ್ ಪುಲ್ಲಿಂಗ್ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದು ಒಬ್ಬರಿಗೊಬ್ಬರು ಬಡಿದಾಡಿಕೊಳ್ಳುವ ವೇಳೆ ಸಲೀಂ ಮೃತಪಟ್ಟಿದ್ದಾನೆ ಎಂದು ಶಂಕಿಸಲಾಗಿದೆ.
ಇದರಿಂದ ಗಾಬರಿಗೊಂಡ ಮಾಜಿ ಶಾಸಕರ ಪುತ್ರ ಮತ್ತು ಆತನ ಹಿಂಬಾಲಕರು ಕಾರಿನಲ್ಲಿ ಸಲೀಂ ಶವವಿಟ್ಟುಕೊಂಡು ನಿರ್ಜನ ಪ್ರದೇಶದಲ್ಲಿ ಬಿಸಾಡಲು ಸುತ್ತಾಡಿದ್ದಾರೆ. ಆದರೆ, ಎಲ್ಲಿಯೂ ಅವರಿಗೆ ಅವಕಾಶ ಸಿಕ್ಕಿಲ್ಲ. ಆದ್ದರಿಂದ ತಮಗೆ ಪರಿಚಯವಿದ್ದ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿ ಪ್ರಕರಣ ಮುಚ್ಚಿಹಾಕಲು ಸಹಕಾರ ಕೇಳಿದ್ದಾನೆ ಎನ್ನಲಾಗಿದೆ.
ಸಿನಿಮಾ ಶೈಲಿಯ ಪ್ಲಾನ್: 10 ಲಕ್ಷ ರೂ. ನಗದು ಮತ್ತು ಒಂದು ಹೊಸ ಕಾರು ಕೊಡಿಸುವ ಡೀಲ್ ಕುದಿರಿಸಿ, ಮೂವರು ಆರೋಪಿಗಳು ಶರಣಾಗಲು ಪ್ಲಾನ್ ರೂಪಿಸಿದ್ದಾರೆ.
ಅದರಂತೆ, ಫೆ.8ರ ರಾತ್ರಿ ಪಂಡಿತಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸಲೀಂ ಮೃತದೇಹವನ್ನು ಟರ್ಪಾಲ್‌ವೊಂದರಲ್ಲಿ ಸುತ್ತಿ ಬಿಸಾಡಿ ಹೋಗಿದ್ದಾರೆ. ಬಳಿಕ ಫೆ.9 ರಂದು ಕೆ.ಆರ್.ಪೇಟೆ ಮೂಲದ ಮೂವರು ಆರೋಪಿಗಳು ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ.
ಜೈಲಿಗೆ ಹೋಗಲು ಮೂವರ ಸಿದ್ಧತೆ: ಇದಕ್ಕಾಗಿ ಬಂಧಿಯಾಗಿರುವ ಮೂವರಿಗೆ ಲಕ್ಷಗಟ್ಟಲೆ ಹಣ ಹಾಗೂ ನಂತರದ ದಿನಗಳಲ್ಲಿ ನ್ಯಾಯಾಲಯದ ಜಾಮೀನು ಕೊಡಿಸಿ ಹೊರತಂದು ದೋಷಮುಕ್ತರನ್ನಾಗಿಸುವ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಆದರೆ, ಪ್ಲಾನ್‌ನಂತೆ ಶವ ಬಿಸಾಡಿದ್ದ ಸ್ಥಳ ಅವರ ಠಾಣಾ ವ್ಯಾಪ್ತಿಗೆ ಬಾರದೆ, ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಬಂದ ಹಿನ್ನೆಲೆಯಲ್ಲಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಎ.ಕೆ.ರಾಜೇಶ್, ತನಿಖೆ ಪ್ರಾರಂಭಿಸಿ ಮಾಜಿ ಶಾಸಕರ ಪುತ್ರನನ್ನು ಫೆ.26ರಂದು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ದೊಡ್ಡವರ ಕೈವಾಡ: ಈ ನಡುವೆ ಕೊಲೆ ಪ್ರಕರಣದಲ್ಲಿ ಮಾಜಿ ಶಾಸಕರ ಪುತ್ರನನ್ನು ರಕ್ಷಿಸಬೇಕು ಎಂಬ ಒತ್ತಡ ಪ್ರಭಾವಿಗಳಿಂದ ಬಂದಿದೆ ಎನ್ನುವ ಆರೋಪಗಳು ಸಹ ಕೇಳಿಬಂದಿವೆ. ಘಟನೆಗೆ ಸಂಬಂಧಿಸಿದಂತೆ ಕೆಲವರ ಬಂಧನವಾಗಿದೆ. ಪ್ರಕರಣ ಕುರಿತು ತನಿಖೆ ನಡೆಯುತ್ತಿರುವುದರಿಂದ ಪೂರ್ಣ ಮಾಹಿತಿಯನ್ನು ಬಹಿರಂಗಪಡಿಸಲಾಗುವುದು ಎಂದು ಮಂಡ್ಯ ಎಸ್‌ಪಿ ಎನ್. ಯತೀಶ್ ಹೇಳಿದ್ದಾರೆ.
ಮಂಡ್ಯದಲ್ಲಿ ನಡೆದ ರೈಸ್ ಪುಲ್ಲಿಂಗ್ ಪ್ರಕರಣದ ತನಿಖೆ ನಡೆಯುತ್ತಿದ್ದು, ಈಗಾಗಲೇ ಹಲವರನ್ನು ಬಂಧಿಸಲಾಗಿದೆ.ವಿಚಾರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಹತ್ಯೆಯ ಸಂಬಂಧ ಕ್ರಶರ್ ಹೊಂದಿರುವ ಕೆ ಆರ್ ಪೇಟೆಯ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಇವರೂ ಈ ಪ್ರಕರಣ ಆರೋಪಿಯಾಗಿದ್ದು, ಆರೋಪಿಯನ್ನು ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಆರೋಪಿಗಳು ಸಂಘಟಿತವಾಗಿ ಸಾಕ್ಷ್ಯಾಧಾರಗಳ ನಾಶ ಮಾಡಲು ಒಟ್ಟಾಗಿ ಶ್ರಮಿಸಿದ್ದಾಗಿ ತನಿಖೆಯಿಂದ ತಿಳಿದುಬಂದಿದೆ.
ಒಂದು ದಿನ ಶವವನ್ನು ಕಾರಿನಲ್ಲೇ ಇಟ್ಟಿದ್ದು, ಆರೋಪಿಗಳು ಲಾಡ್ಜ್ ನಲ್ಲಿ ತಂಗಿರುವ ಬಗ್ಗೆ ಮಾಹಿತಿ ಲಭಿಸಿದೆ. ನಂತರ ಎಂಟನೇ ತಾರೀಕು ಸಂಜೆ ಮಳವಳ್ಳಿಯಲ್ಲಿ ಜಾಗವನ್ನು ನೋಡಿಕೊಂಡು ಹೋಗಿ ಮಧ್ಯರಾತ್ರಿ ಶವವನ್ನು ಎಸೆದು ಹೋಗಿರುವ ಬಗ್ಗೆ ಮಾಹಿತಿ ದೊರೆತಿದೆ. ನಂತರ ಶವದ ಗುರುತು ಪತ್ತೆ ಹಚ್ಚಲಾಗಿದೆ ಎಂದು ಹೇಳಿದ್ದಾರೆ. ಸದ್ಯ ತನಿಖೆ ನಡೆಯುತ್ತಿರುವುದಾಗಿ ಹೇಳಿದ್ದಾರೆ.