ಮಂಡ್ಯ: ಹನಿಟ್ರ್ಯಾಪ್ ಸುಳಿಗೆ ಸಿಲುಕಿದ ಪ್ರತಿಷ್ಠಿತ ಚಿನ್ನದ ವ್ಯಾಪಾರಿ ಹಾಗೂ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಯೊಬ್ಬರು 50 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದು, ಆರು ತಿಂಗಳ ನಂತರ ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಚಿನ್ನದ ವ್ಯಾಪಾರಿ ಜಗನ್ನಾಥ್ ಶೆಟ್ಟಿ ಹನಿಟ್ರ್ಯಾಪ್ಗೆ ಸಿಲುಕಿದವರು.
ಫೆಬ್ರವರಿ 26 ರಂದು ಮೈಸೂರಿನಲ್ಲಿ ಈ ಕೃತ್ಯ ನಡೆದಿದ್ದು, ಮಂಗಳೂರಿಗೆ ತೆರಳಲು ಆ ದಿನ ರಾತ್ರಿ ಮಂಡ್ಯದಲ್ಲಿ ಬಸ್ಸಿಗಾಗಿ ಜಗನ್ನಾಥ್ ಶೆಟ್ಟಿ ಕಾಯುತ್ತಿದ್ದರು. ಈ ವೇಳೆ ಮೈಸೂರಿಗೆ ಡ್ರಾಪ್ ಕೊಡುವುದಾಗಿ ತಿಳಿಸಿ ನಾಲ್ವರು ಕಾರಿನಲ್ಲಿ ಅವರನ್ನು ಕರೆದೊಯ್ದಿದ್ದಾರೆ. ನಂತರ ಚಿನ್ನದ ಪರೀಕ್ಷೆಗೆಂದು ಅವರನ್ನು ಅಪಹರಿಸಿ ಲಾಡ್ಜ್ ರೂಮ್‍ಗೆ ಕರೆದೊಯ್ದಿದ್ದಾರೆ. ರೂಮ್‍ನಲ್ಲಿ ಯುವತಿ ಜೊತೆ ವಿಡಿಯೋ ಚಿತ್ರೀಕರಿಸಿಕೊಂಡು ಬಳಿಕ 4 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ.
ಕೊನೆಗೆ 50 ಲಕ್ಷ ಕೊಟ್ಟು ಅಲ್ಲಿಂದ ಜಗನ್ನಾಥ್ ತೆರಳಿದ್ದರು. ಆದರೆ, ಮತ್ತೆ ಹಣಕ್ಕಾಗಿ ಗ್ಯಾಂಗ್ ಬೇಡಿಕೆ ಇಟ್ಟಿದ್ದಲ್ಲದೇ, ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದೆ. ಇದರಿಂದ ಬೇಸತ್ತ ಜಗನ್ನಾಥ್ ಶೆಟ್ಟಿ ಅವರು 6 ತಿಂಗಳ ಬಳಿಕ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇರೆಗೆ ಸಮಾಜಸೇವೆ, ಮಾನವ ಹಕ್ಕು ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಸಲ್ಮಾಬಾನು ಎಂಬುವರನ್ನು ಪಶ್ಚಿಮ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ : ಪಾಕ್ ಮಹಿಳಾ ಏಜೆಂಟರ್ ಹನಿಟ್ರ್ಯಾಪ್ ಬಲೆಗೆ ಬಿದ್ದ ಯೋಧ.. ಸೇನಾ ಗೌಪ್ಯ ಮಾಹಿತಿ ರವಾನೆ, ಬಂಧನ