ಮಂಡ್ಯ: ವ್ಯಾಕ್ಸಿನ್ ತೆಗೆದುಕೊಂಡಿದ್ದೇವೆ ಎಂದು ನಿರ್ಲಕ್ಷ್ಯ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಜಿಲ್ಲೆಯ ನಾಗಮಂಗಲದಲ್ಲಿ ಮಾತನಾಡಿದ ಶ್ರೀಗಳು, ಈಗ ಬಂದಿರುವ ಕೊರೊನಾ 2ನೇ ಅಲೆಗೆ ಎರಡು ತಲೆ ಇದೆ. ಒಂದು ಶೀಘ್ರವಾಗಿ ಹರಡುವುದು. ಎರಡನೆಯದ್ದು ವ್ಯಾಕ್ಸಿನ್‌ನನ್ನು ತಿಂದು ಅದರ ಪರಿಣಾಮವನ್ನು ಕಡಿಮೆ ಮಾಡುವುದು ಎಂದು ಜನರಿಗೆ ಎಚ್ಚರಿಸಿದರು.
ಸದ್ಯದ ಅಭಿಪ್ರಾಯ ವ್ಯಾಕ್ಸಿನ್ ಒಂದೇ ಪರಿಹಾರವಾಗಿದೆ. ಲಸಿಕೆ ತೆಗೆದುಕೊಂಡರೆ ಕೊರೊನಾದಿಂದ ಮುಕ್ತವಾಗಬಹುದು ಎನ್ನುವುದು ಎಲ್ಲರ ಅಭಿಪ್ರಾಯ. ಆದರೆ ವ್ಯಾಕ್ಸಿನ್ ತೆಗೆದುಕೊಂಡಿದ್ದೇನೆ ಎಂದು ಬೇಜವಾಬ್ದಾರಿಯಿಂದ ಓಡಾಡಿದ್ರೆ ಅಪಾಯ ತಪ್ಪಿದ್ದಲ್ಲ ಎಂದು ಕಿವಿಮಾತು ಹೇಳಿದ್ರು.
ಕೊರೊನಾ ವೈರಸ್ ಆರು ತಿಂಗಳು, ವರ್ಷಕ್ಕೆ ರೂಪವನ್ನು ಬದಲಿಸಿಕೊಳ್ಳುತ್ತಿದೆ. ತನ್ನೊಳಗೆ ಇರುವ ಶಕ್ತಿಯನ್ನು ಸಹ ವೈರಸ್ ಹೆಚ್ಚಿಸಿಕೊಳ್ಳುತ್ತಿದೆ. ಸದ್ಯ ಯಾವುದೇ ಔಷಧ ಪೂರ್ಣ ಗುಣವನ್ನು ತಂದುಕೊಡುವುದಿಲ್ಲ. ಜನರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಸ್ಎಂಎಸ್ ಸೂತ್ರವನ್ನು ಕಡ್ಡಾಯವಾಗಿ ಪಾಲಿಸಬೇಕು. ಹಾಗಂದ್ರೆ ಸಾಮಾಜಿಕ ಅಂತರ, ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳುವುದು, ನಮ್ಮನ್ನ ಶುದ್ಧವಾಗಿ ಇಟ್ಟುಕೊಳ್ಳುವುದು ಎಂದು ತಿಳಿಸಿದ ಶ್ರೀಗಳು, ಇದನ್ನು ಸದಾ ಕಾಲ ಅನುಸರಿಸಿದರೆ ಎಲ್ಲ ಕಾಯಿಲೆಗಳಿಗೂ ಪರಿಹಾರ ಎಂದು ಜನರಿಗೆ ಬುದ್ಧಿ ಹೇಳಿದರು.
ಸದ್ಯ ಜನರ ಬದುಕು ಜರ್ಜರಿತವಾಗಿದೆ. ಎಷ್ಟೋ ಜನ ಕೆಲಸ ಇಲ್ಲದೇ ನಿರುದ್ಯೋಗಿಗಳಾಗಿದ್ದಾರೆ. ಮನೆಗಳಲ್ಲಿ ಬಡತನ ಕಾಡುತ್ತಿದೆ. ಹಲವಾರು ರೀತಿಯಲ್ಲಿ ಬದುಕನ್ನು ಕಿತ್ತುಕೊಂಡಿದೆ. ಈ ವೈರಸ್ ಮುಂದುವರಿದು ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿ ಹೇಳಿದರು.
ಓದಿ: ಮತ್ತೆ ಆ್ಯಕ್ಟಿವ್ ಆದ ರಮೇಶ್ ಜಾರಕಿಹೊಳಿ: ಸಂಪುಟ ಸೇರಲು ಕಸರತ್ತು!