ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಶ್ರೀನಿವಾಸ ಅಗ್ರಹಾರದ ವಿದ್ಯಾರ್ಥಿಗಳು ಪ್ರಕೃತಿಗೆ ತಮ್ಮದೇ ಆದ ಕೊಡುಗೆ ನೀಡಲು ಹೊರಟಿದ್ದಾರೆ. ವಿದ್ಯಾರ್ಥಿಗಳು ತಮ್ಮೂರಿನಲ್ಲಿ ಹಸಿರು ಸೈನ್ಯ ಎಂಬ ಪಡೆ ರಚಿಸಿಕೊಂಡು, ತಮ್ಮೂರ ಸಮೀಪದಲ್ಲಿರುವ ಕರಿಘಟ್ಟ ಬೆಟ್ಟದ ಹಸಿರೀಕರಣಕ್ಕೆ ಮುಂದಾಗಿದ್ದಾರೆ.
ರಜಾ ದಿನಗಳು ಸೇರಿದಂತೆ ಬೆಳಗ್ಗೆ ಮತ್ತು ಸಂಜೆ ತಮ್ಮ ಹಸಿರು ಪಡೆಯೊಂದಿಗೆ ಪರಿಸರ ಪ್ರೇಮಿಯೊಬ್ಬರ ಮಾರ್ಗದರ್ಶನದಲ್ಲಿ ಕಡಿದಾದ ಬೆಟ್ಟದ ಮೇಲೆ ಸಸಿಗಳನ್ನು ನೆಡುವ ಕಾರ್ಯ ಮಾಡುತ್ತಿದ್ದಾರೆ. ನೂರಾರು ಸಸಿಗಳನ್ನು ಬೆಟ್ಟದ ಮೇಲಕ್ಕೆ ಡೋಲಿಯ ಮೂಲಕ ಹೊತ್ತೊಯ್ದು, ಗಿಡ ನೆಟ್ಟು ಬೆಟ್ಟದ ಹಸೀರೀಕರಣ ಕಾರ್ಯಕ್ಕೆ ಮುಂದಾಗಿದ್ದಾರೆ.
ಪರಿಸರ ಪ್ರೇಮಿಯಾಗಿರೋ ರಮೇಶ್ ಮಾರ್ಗದರ್ಶನದಲ್ಲಿ ಕೆಲಸ:
ಸುಮಾರು 15 ರಿಂದ 20 ಮಂದಿ ವಿದ್ಯಾರ್ಥಿಗಳಿರುವ ಈ ಹಸಿರು ಸೈನ್ಯ ಪಡೆ, ಸ್ಥಳೀಯ ಪರಿಸರ ಪ್ರೇಮಿಯಾಗಿರೋ ರಮೇಶ್ ಮಾರ್ಗದರ್ಶನ ಮತ್ತು ಸಹಕಾರದಿಂದ ಬೆಟ್ಟದಲ್ಲಿ ಗಿಡ ನೆಡುವ ಕಾಯಕ ಮಾಡುತ್ತಾ ಬರುತ್ತಿದ್ದಾರೆ.
ಇವರು ನಿತ್ಯ ಬೆಳಗ್ಗೆ ಮತ್ತು ಸಂಜೆ ವೇಳೆ ಈ ಬೆಟ್ಟಕ್ಕೆ ಆಗಮಿಸಿ ಗಿಡ ನೆಡುವುದು, ನೆಟ್ಟ ಗಿಡಕ್ಕೆ ನೀರು ಗೊಬ್ಬರ ಹಾಕುವುದು ಸೇರಿದಂತೆ ಗಿಡಗಳಿಗೆ ಪ್ರವಾಸಿಗರು ಬಿಸಾಡಿ ಹೋಗುವ ಪ್ಲಾಸ್ಟಿಕ್ ಬಾಟಿಲಿಗಳನ್ನೇ ಹೆಕ್ಕಿ ತಂದು ನೆಟ್ಟಿರೋ ಗಿಡಕ್ಕೆ ಹನಿ ನೀರಾವರಿ ವ್ಯವಸ್ಥೆ ಕಲ್ಪಿಸುವ ಕಾರ್ಯವನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಮಾಡುತ್ತಿದ್ದಾರೆ.
ರಮೇಶ್ ಕೆಲಸಕ್ಕೆ ಹಸಿರು ಸೈನ್ಯ ಪಡೆ ಸಾಥ್:
ಈ ಮಕ್ಕಳ ಪರಿಸರ ಕಾಳಜಿಯಿಂದಾಗಿ ಇಂದು ಕರಿಘಟ್ಟ ಬೆಟ್ಟ ಹಸಿರಿನಿಂದ ನಳನಳಿಸ್ತಿದೆ. ಹಲವು ವರ್ಷಗಳಿಂದ ಕರಿಘಟ್ಟ ಬೆಟ್ಟದಲ್ಲಿ ಗಿಡ ಮರಗಳನ್ನು ನೆಟ್ಟು ಏಕಾಂಗಿಯಾಗಿ ಕೆಲಸ ಮಾಡ್ತಿದ್ದ ಪರಿಸರ ಪ್ರೇಮಿ ರಮೇಶ್ ಕೆಲಸಕ್ಕೆ ಇದೀಗ ಈ ಹಸಿರು ಸೈನ್ಯ ಪಡೆಯ ವಿದ್ಯಾರ್ಥಿಗಳು ಕೈ ಜೋಡಿಸಿದ್ದಾರೆ. ಪರಿಸರ ಪ್ರೇಮಿ ರಮೇಶ್ ರವರ ಸಹಕಾರ ಮತ್ತು ಮಾರ್ಗದರ್ಶನದಲ್ಲೇ ಕರಿಘಟ್ಟ ಬೆಟ್ಟದ ಹಸೀರೀಕರಣ ಕಾರ್ಯಕ್ಕೆ ಬಲ ತುಂಬಿದ್ದಾರೆ.
ಇದನ್ನೂ ಓದಿ: ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ: ರೈತರ ಕಣ್ಣಲ್ಲಿ ನೀರು
ವಿದ್ಯಾರ್ಥಿಗಳ ಈ ಪರಿಸರ ಪ್ರೇಮ ಕಂಡು ಪರಿಸರ ಪ್ರೇಮಿ ರಮೇಶ್ ಕೂಡ ಮಕ್ಕಳ ಈ ಕೆಲಸವನ್ನು ಶ್ಲಾಘಿಸಿದ್ದಾರೆ. ಇನ್ನು ಗ್ರಾಮಸ್ಥರು ಕೂಡ ತಮ್ಮೂರಿನ ಈ ಮಕ್ಕಳ ಪರಿಸರ ಪ್ರೇಮದ ಕಳಕಳಿಗೆ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ.