ಮಂಡ್ಯ: ಬೆಂಗಳೂರು - ಮೈಸೂರು ದಶಪಥ ಹೆದ್ದಾರಿಯಲ್ಲಿ ಭೀಕರ ಸರಣಿ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಾರೊಂದು ನಡುರಸ್ತೆಯಲ್ಲೇ ಹೊತ್ತಿ ಉರಿದಿದೆ. ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗೌರಿಪುರ ಗ್ರಾಮದಲ್ಲಿ ಅಪಘಾತ ಸಂಭವಿಸಿದ್ದು, ಅತಿ ವೇಗವಾಗಿ ಬಂದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮುಂಭಾಗದಲ್ಲಿದ್ದ ಇತರ ಕಾರುಗಳಿಗೂ ಡಿಕ್ಕಿಯಾಗಿವೆ.
ಡಿಕ್ಕಿ ಹೊಡೆದ ರಭಸಕ್ಕೆ ಕಾರೊಂದು ನಡುರಸ್ತೆಯಲ್ಲೇ ಹೊತ್ತಿ ಉರಿದಿದೆ. ಕಾರಿನಲ್ಲಿ ಇದ್ದವರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಕಾರಿನ ಕಿಟಕಿ ಗಾಜು ಒಡೆದು ಕಾರಿನಲ್ಲಿದ್ದವರನ್ನು ರಕ್ಷಣೆ ಮಾಡಲಾಗಿದೆ. ಅಪಘಾತದ ವೇಳೆ, ಮಂಡ್ಯ ಎಸ್ ಪಿ ವಾಹನಕ್ಕೂ ಕಾರು ಡಿಕ್ಕಿ ಹೊಡೆದಿದ್ದು, ಮಂಡ್ಯ ಎಸ್ ಪಿ ಯತೀಶ್ ಅವರು ಶ್ರೀರಂಗಪಟ್ಟಣ ಕಡೆಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಬಿಎಂಟಿಸಿ ಬಸ್ ಹರಿದು ವಿದ್ಯಾರ್ಥಿ ಸಾವು : ಬಿಎಂಟಿಸಿ ಬಸ್ ಹರಿದು ಇಂಜಿನಿಯರಿಂಗ್ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ಬೆಳಿಗ್ಗೆ ಬೆಂಗಳೂರಿನ ಯಶವಂತಪುರದ ಗಾರೆಪ್ಪನಪಾಳ್ಯ ರಸ್ತೆಯ ಹೂವಿನ ಮಾರ್ಕೆಟ್ ಬಳಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಗಂಗಾಧರ್(21) ಎಂದು ಗುರುತಿಸಲಾಗಿದೆ.
ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಗಂಗಾಧರ್ ಹೆಚ್ಎಎಲ್ನಲ್ಲಿ ಇಂಟರ್ನ್ಶಿಪ್ಗೆಂದು ಕಾಲೇಜಿನಿಂದ ಸರ್ಟಿಫಿಕೇಟ್ ತರಲು ಬೈಕ್ನಲ್ಲಿ ತೆರಳುತ್ತಿದ್ದನು. ಈ ಸಂದರ್ಭ ಹಿಂಬದಿಯಿಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಈ ವೇಳೆ, ರಸ್ತೆಗೆಸೆಯಲ್ಪಟ್ಟ ಗಂಗಾಧರ್ ಮೇಲೆ ಬಸ್ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತದೇಹವನ್ನು ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಯಶವಂತಪುರ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
10 ದಿನಗಳ ಅಂತರದಲ್ಲಿ ಕಿಲ್ಲರ್ ಬಿಎಂಟಿಸಿಗೆ ಮೂರು ಬಲಿ : ಬೆಂಗಳೂರು ನಗರದಲ್ಲಿ 10 ದಿನಗಳ ಅಂತರದಲ್ಲಿ ಕಿಲ್ಲರ್ ಬಿಎಂಟಿಸಿ ಮೂರು ಜನ ಸಾವನ್ನಪ್ಪಿದ್ದಾರೆ. ಅಕ್ಟೋಬರ್ 5ರಂದು ಅಟ್ಟೂರಿನ ಮದರ್ ಡೈರಿ ಬಳಿ ಬಿಎಂಟಿಸಿ ಬಸ್ ಡಿಕ್ಕಿಯಾಗಿ ನೆಲಕ್ಕೆ ಬಿದ್ದ ಆ್ಯಕ್ಟಿವಾ ಸ್ಕೂಟರ್ ಚಾಲಕನ ಮೇಲೆ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದ. ಅಕ್ಟೋಬರ್ 9ರಂದು ಬಿಎಂಟಿಸಿ ಹರಿದು ಮೂರು ವರ್ಷದ ಮಗು ಸಾವನ್ನಪ್ಪಿದ್ದ ಘಟನೆ ಗಾರೇಪಾಳ್ಯ ಜಂಕ್ಷನ್ನಲ್ಲಿ ನಡೆದಿತ್ತು.
ಇದನ್ನೂ ಓದಿ : ಬಿಎಂಟಿಸಿ ಬಸ್ ಹರಿದು ವಿದ್ಯಾರ್ಥಿ ಸಾವು: ಕಳೆದ ಹತ್ತು ದಿನಗಳಲ್ಲಿ ಮೂರನೇ ಬಲಿ