ಮಂಡ್ಯ: ಸರ್ಕಾರದ ಆಸ್ತಿ-ಪಾಸ್ತಿಗಳನ್ನು ಮಾರಾಟ ಮಾಡೋದು, ಗುತ್ತಿಗೆ ಕೊಡೋದು ಬಿಜೆಪಿಗರ ಕೆಲಸ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.
ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ಜಿ.ಮಾದೇಗೌಡರ ಆರೋಗ್ಯ ವಿಚಾರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಶುಗರ್ ಕಾರ್ಖಾನೆಯನ್ನು 40 ವರ್ಷ ಖಾಸಗಿಗೆ ಗುತ್ತಿಗೆ ನೀಡುವ ಸರ್ಕಾರದ ನಿರ್ಧಾರಕ್ಕೆ ಡಿಕೆಶಿ ಆಕ್ಷೇಪ ವ್ಯಕ್ತಪಡಿಸಿದರು.
'ಮಹರಾಜರು ರೈತರಿಗೆ ದೊಡ್ಡ ಆಸ್ತಿ ಕೊಟ್ಟಿದ್ದಾರೆ'
ಜನರ ಆಸ್ತಿ ಉಳಿಸೋದು ನಮ್ಮ ಕೆಲಸ, ಸರ್ಕಾರದ ಆಸ್ತಿ ಜನರಿಗೆ ಸೇರಿದ್ದು. ಆದ್ರೆ ಬಿಜೆಪಿಯವರದ್ದು ಬಿಸ್ನೆಸ್ ಮೈಂಡ್, ಬಿಸ್ನೆಸ್ ರೀತಿ ಯೋಚನೆ ಮಾಡ್ತಾರೆ. ಕೆಎಸ್‌ಆರ್‌ಟಿಸಿ, ಆಸ್ಪತ್ರೆನಾ ಬಿಸ್ನೆಸ್ ರೀತಿ ಯೋಚನೆ ಮಾಡಲಾಗುತ್ತಾ? ಸಮಾಜ ಸೇವೆ ರೀತಿ ಯೋಚನೆ ಮಾಡಬೇಕು. ರೈತರ ಸೇವೆಗೆಂದು ಮಹಾರಾಜರು ಒಂದು ದೊಡ್ಡ ಆಸ್ತಿ ಮಾಡಿಟ್ಟು ಹೋಗಿದ್ದಾರೆ. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಸರ್ಕಾರವೇ ಮುನ್ನಡೆಸಲಿ ಎಂದು ಡಿಕೆಶಿ ಒತ್ತಾಯಿಸಿದರು.
ಇದನ್ನೂ ಓದಿ: ಮೈಸೂರು ಸಕ್ಕರೆ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳಿ: ಸಿಎಂಗೆ ಡಿಕೆಶಿ ಪತ್ರ