ಮಂಡ್ಯ: ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ಅಂಗವಾಗಿ ಇಂದು ರಾಜ್ಯದ್ಯಂತ ಕಿಸಾನ್ ಸಮ್ಮಾನ್ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರಧಾನಿ ಮೋದಿ ಅವರು ದೇಶದ 9 ಕೋಟಿ ರೈತರಿಗೆ 18 ಸಾವಿರ ಕೋಟಿ ರೂ. ಹಣ ಬಿಡುಗಡೆ ಮಾಡುವರು ಎಂದು ಮಾಹಿತಿ ನೀಡಿದರು.
ಜಿಲ್ಲೆ, ಮಂಡಲ ಕೇಂದ್ರಗಳಲ್ಲಿ ಬಿಜೆಪಿ ಪದಾಧಿಕಾರಿಗಳು ರೈತರನ್ನು ಆಹ್ವಾನಿಸಿ ಪ್ರಧಾನಿ ಭಾಷಣದ ನೇರ ಪ್ರಸಾರವನ್ನು ಅವರೊಂದಿಗೆ ವೀಕ್ಷಿಸಲಿದ್ದಾರೆ ಎಂದರಲ್ಲದೇ ಸ್ವಯಂ ಪ್ರೇರಿತವಾಗಿ ರೈತರು ಕಾಯ್ದೆ ತಿದ್ದುಪಡಿ ವಿರೋಧಿಸುತ್ತಿಲ್ಲ. ಆದರೆ, ಪಟ್ಟಭದ್ರ ಹಿತಾಸಕ್ತಿಗಳು ರೈತರನ್ನು ದಾರಿ ತಪ್ಪಿಸುತ್ತಿವೆ ಎಂದರು.
ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯ ಹಿಂದೆ ಎಡಪಂಥೀಯರು, ಬುದ್ಧಿಜೀವಿಗಳು, ದಲ್ಲಾಳಿಗಳು, ಪ್ರತಿಪಕ್ಷದವರ ಕೈವಾಡವಿದೆ. ನಕ್ಸಲ್ ಚಟುವಟಿಕೆ ಸೇರಿದಂತೆ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜೈಲಿನಲ್ಲಿರುವವರ ಬಿಡುಗಡೆ ಮಾಡಬೇಕು ಎಂಬ ಹೋರಾಟದ ಹಿಂದೆ ಕುತಂತ್ರವಿದೆ ಎಂದು ತಿಳಿಸಿದರು.
ಕೇಂದ್ರ ಕೃಷಿ ಸಚಿವ ತೋಮರ್ ಅವರು ರೈತರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ರೈತರಿಗೆ ಅನುಕೂಲವಾಗುವ ತಿದ್ದುಪಡಿ ಬಗ್ಗೆ ಮನವರಿಕೆ ಮಾಡಿದ್ದಾರೆ. ಆದರೂ ತಿದ್ದುಪಡಿ ವಿರೋಧಿಸುತ್ತಿದ್ದಾರೆ ಎಂದರು.