ಮಂಡ್ಯ: ಸಾಮಾನ್ಯವಾಗಿ ರಾಜಕೀಯ ಚರ್ಚೆಗಳು ಟೀ ಅಂಗಡಿ, ಸಂತೆ ಮೈದಾನ, ಜನ ಸೇರುವ ಸ್ಥಳಗಳಲ್ಲಿ ಜೋರಾಗಿಯೇ ನಡೆಯುತ್ತದೆ. ಇಂತಹ ಕೆಲಸಕ್ಕೆ ಇಲ್ಲೊಂದು ಟೀ ಅಂಗಡಿಯಲ್ಲಿ ಬ್ರೇಕ್ ಹಾಕಲಾಗಿದೆ.
ಮಂಡ್ಯದ ಅಶೋಕ ನಗರದಲ್ಲಿರುವ ವಾದಿರಾಜ ಟೀ ಅಂಗಡಿ ಮಾಲೀಕ ತನ್ನ ಅಂಗಡಿಯಲ್ಲಿ ರಾಜಕೀಯ ಚರ್ಚೆ ನಿಷೇಧಿಸಿ ಬೋರ್ಡ್ ಹಾಕಿದ್ದಾನೆ. ಇದು ರಾಜಕೀಯ ವಿಶ್ಲೇಷಣೆ ಮಾಡುವ ಜನರಿಗೆ ನಿರಾಸೆ ಮೂಡಿಸಿದೆ.
ಸುಮಲತಾ ಅಂಗೇ ಕಣ್ಲಾ, ಕುಮಾರಸ್ವಾಮಿ ಇಂಗೆ ಕಣ್ಲಾ, ರಾತ್ರಿ ದುಡ್ಡು ಕೊಟ್ರು ಕಣ್ಲಾ ಅನ್ನೋ ಮಾತಿಗೆ ಬ್ರೇಕ್ ಹಾಕುವ ಸಲುವಾಗಿ ಈ ರೀತಿಯ ಬೋರ್ಡ್ ಹಾಕಲಾಗಿದೆಯಂತೆ.
ಮಂಡ್ಯ ಲೋಕ ಸಮರದ ಹೈ-ವೊಲ್ಟೇಜ್ ಕ್ಷೇತ್ರವಾಗಿದ್ರೆ, ಇತ್ತ ಟೀ ಅಂಗಡಿಯಲ್ಲಿ ರಾಜಕೀಯ ಚರ್ಚೆಗೆ ಬ್ರೇಕ್ ಹಾಕಲಾಗಿದೆ. ಪುಡಾರಿಗಳನ್ನು ಹುಡುಕಿ ಬರುವ ಬೆಂಬಲಿಗರು ಅರ್ಧ ಟೀ ಕುಡಿದು ಅನಗತ್ಯ ಚರ್ಚೆ ಮಾಡ್ತಾರೆ. ಇಂತಹ ಅನಗತ್ಯ ಚರ್ಚೆ, ವಾಗ್ವಾದಕ್ಕೆ ಕಾರಣವಾಗಿ ಗಿರಾಕಿಗಳು ಅಂಗಡಿಗೆ ಬರೋದಿಲ್ಲ. ಹೀಗಾಗಿ ರಾಜಕೀಯ ಮಾತಿಗೆ ಬ್ರೇಕ್ ಹಾಕಿರೋದಾಗಿ ಟೀ ಅಂಗಡಿ ಮಾಲೀಕ ಹೇಳುತ್ತಿದ್ದಾರೆ.