ಮಂಡ್ಯ: ಹನುಮ ಜಯಂತಿ ನಿಮಿತ್ತ ಶ್ರೀರಂಗಪಟ್ಟಣದಲ್ಲಿ ಸಾವಿರಾರು ಹನುಮ ಮಾಲಾಧಾರಿಗಳು ವಿಜೃಂಭಣೆಯಿಂದ ಸಂಕೀರ್ತನಾ ಯಾತ್ರೆ ನಡೆಸಿದರು.
ಶ್ರೀರಂಗಪಟ್ಟಣದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ನಿಮಿಷಾಂಭ ದೇವಸ್ಥಾನದಿಂದ ಹನುಮ ಮಾಲಾಧಾರಿಗಳ ಮೆರವಣಿಗೆ ಹೊರಟಿತು. ಜೈ ರಾಮ್ ಎಂದು ಘೋಷಣೆ ಕೂಗುತ್ತಾ, ಕೇಸರಿ ಬಾವುಟ ಬೀಸುತ್ತಾ ಕಲಾತಂಡಗಳೊಂದಿಗೆ ರಸ್ತೆಗಳಲ್ಲಿ ಮೆರವಣಿಗೆ ಸಾಗಿತು.
ಖಾಕಿ ಬಿಗಿ ಭದ್ರತೆ:
ಸಂಕೀರ್ತನಾ ಯಾತ್ರಾ ಮೆರವಣಿಗೆಯಲ್ಲಿ ಹನುಮ ಭಕ್ತರ ಜೊತೆ ಹೆಚ್ಚಿನ ಪೊಲೀಸ್ ಸಿಬ್ಬಂದಿ ಮೆರವಣಿಗೆಯಲ್ಲಿ ಸಾಗಿದರು. ಪಟ್ಟಣದ ಜಾಮೀಯ ಮಸೀದಿಗೆ ಸುತ್ತಲೂ ಬ್ಯಾರಿಕೇಡ್ ಹಾಕಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಸಂಕೀರ್ತನಾ ಯಾತ್ರೆಯ ನಿಮಿತ್ತ ಪಟ್ಟಣದಲ್ಲಿ ಇಂದು ಕೇಸರಿ ಧ್ಚಜಗಳು ರಾರಾಜಿಸಿ ರಾಮನ ಜಪದ ಜೊತೆ ಹನುಮ ಭಕ್ತರಿಂದ ಹನುಮನಿಗೆ ಜೈಕಾರದ ಘೋಷಣೆ ಜೋರಾಗಿತ್ತು.
ಹನುಮ ಮಾಲಾಧಾರಿಗಳ ಮೇಲೆ ಹಲ್ಲೆ:
![Hanuman mladari yatra under police surveillance in Srirangapatna](https://etvbharatimages.akamaized.net/etvbharat/prod-images/13927515_thum.jpg)
ಜಾಮೀಯ ಮಸೀದಿ ಬಳಿ ಸಂಕೀರ್ತನಾ ಯಾತ್ರೆ ಮೆರವಣಿಗೆ ತಲುಪಿತ್ತಿದ್ದಂತೆ ಪೊಲೀಸರು ಅಲರ್ಟ್ ಆದರು. ಈ ವೇಳೆ, ರಾಮನ ಮಕ್ಕಳು ನಾವೆಲ್ಲ, ಟಿಪ್ಪು ಸಂತತಿ ಬೇಕಿಲ್ಲ. ಹನುಮನ ಪಾದದ ಮೇಲಾಣೆ, ಇಲ್ಲೇ ಮಂದಿರ ಕಟ್ಟುವೆವು.ಜೈ ಶ್ರೀರಾಮ್, ಜೈ ಹನುಮಾನ್ ಪರ ಘೋಷಣೆ ಕೂಗಿ ಹನುಮ ಮಾಲೆಧಾರಿಗಳು ಕುಣಿದು ಕುಪ್ಪಳಿಸಿದರು.
ಆಗ ಅನ್ಯಧರ್ಮೀಯ ಮುಸ್ಲಿಂ ಯುವಕ ಮಧ್ಯೆ ಬಂದು ಹನುಮ ಮಾಲಾಧಾರಿಗಳ ಮೇಲೆ ಹಲ್ಲೆಗೆ ಮುಂದಾದರು. ಈ ವೇಳೆ ಯುವಕನಿಗೆ ಮಾಲಾಧಾರಿಗಳು ಧರ್ಮದೇಟು ನೀಡಿದರು. ಬಳಿಕ ಆತನನ್ನು ಪೊಲೀಸರು ರಕ್ಷಿಸಿದರು.
ಇನ್ನೂ ಹಿಂದೂ ಜಾಗರಣ ವೇದಿಕೆ ಪ್ರಾಂತೀಯ ಅಧ್ಯಕ್ಷ ಗೋ. ಕೇಶವ ಮೂರ್ತಿ ಮಾತನಾಡಿ, ಮಾಲೆ ವಿಸರ್ಜಿಸಿ ಹನುಮನಲ್ಲಿ ಸಂಕಲ್ಪ ಮಾಡೋಣ, ಹನುಮಂತ ನಿನ್ನ ಜಾಗಕ್ಕೆ ನೀನು ಹೋಗಪ್ಪ. ನಿನ್ನನ್ನು ಮೂಡಲ ಬಾಗಿಲ ದಿಕ್ಕಿನಲ್ಲಿ ನೋಡುವ ಬಯಕೆ ನಮ್ಮದಾಗಿದೆ. ಟಿಪ್ಪುವಿನ ಹೆಸರಿನಿ ಹಿಂದೆ ಯಾರು ಹೋಗ್ತಾರೋ ಅವರೆಲ್ಲ ಸರ್ವನಾಶ ಆಗುತ್ತಾರೆ ಎಂದರು.
ಬಳಿಕ ಹಿಂದೂ ಜಾಗರಣಾ ವೇದಿಕೆಯ ರಾಧಾಕೃಷ್ಣ ಮಾತನಾಡಿ, ಹನುಮ ಅವನ ಜಾಗದಲ್ಲಿ ಮತ್ತೆ ಪ್ರತಿಷ್ಠಾಪನೆ ಆಗಬೇಕು. ನಾವೆಲ್ಲ ರಾಮನ ಭಕ್ತರಾಗಿ ಹನುಮನನ್ನು ಪ್ರತಿಷ್ಠಾಪನೆಮಾಡಬೇಕು. ಒಬ್ಬೊಬ್ಬ ಹಿಂದೂ ಈ ಕಾರ್ಯದಲ್ಲಿ ಭಾಗವಹಿಸಬೇಕು. ನಾವೆಲ್ಲಾ ರಾಮನ ಕಪಿಗಳು, ಶ್ರೀರಂಗಪಟ್ಟಣದಲ್ಲಿ ಮಾತ್ರ ದೇವರಿಗೆ ಅಪಮಾನವಾಗಿಲ್ಲ. ದೇಶ ವ್ಯಾಪ್ತಿ ದೇವರಿಗೆ ಅಪಮಾನವಾಗಿದೆ.
ಹಿಂದೂಗಳ ಶ್ರದ್ಧ ಕಡಿಮೆ ಮಾಡಲು ದಾಳಿ ನಡೆದಿವೆ. ಹಿಂದೂ ಧರ್ಮಕ್ಕೆ ದ್ರೋಹ ಮಾಡುವ ರಾಜಕಾರಣಿಗಳೆ ಮುಂದೆ ದಾಳಿ ನಡೆದರೆ ನಾವ್ಯಾರು ಹೆದರಿ ಓಡುವುದಿಲ್ಲ. ನಮ್ಮ ಪ್ರಾಣ ತ್ಯಾಗ ಮಾಡಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ಸಹ ನೀಡಿದರು.