ಮಂಡ್ಯ: ''ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿಹೋಗಿದೆ. ಬೀದಿ ಬೀದಿಯಲ್ಲೂ ಬಿಜೆಪಿ ಭ್ರಷ್ಟಾಚಾರದ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ವಿಧಾನಸೌಧದ ಪ್ರತಿಯೊಂದು ಗೋಡೆ ದುಡ್ಡು ದುಡ್ಡು ಅನ್ನುತ್ತೆ. ಕಂಟ್ರಾಕ್ಟರ್ಗಳೇ ಪ್ರಧಾನಿಗೆ ಪತ್ರ ಬರೆದು ಸಿಎಂ ಬಸವರಾಜ ಬೊಮ್ಮಾಯಿಗೆ ಸರಿಯಾಗಿ ಬುದ್ಧಿ ಹೇಳಿ, ಕ್ರಮ ಕೈಗೊಳ್ಳಿ ಅಂತ ಪತ್ರ ಬರೆದರು ಕೂಡಾ ಸಿಎಂ ಮೇಲೆ ಯಾವ ಕ್ರಮ ಕೈಗೊಳ್ಳಲಿಲ್ಲ'' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ವಿರುದ್ಧ ಕಿಡಿಕಾರಿದ ಸಿದ್ದು: ನಾಗಮಂಗಲ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಪರ ಅಬ್ಬರದ ಪ್ರಚಾರ ನಡೆಸಿ ಮಾತನಾಡಿದರು. ''ಮೋದಿ ನಾ ಕಾವುಂಗಾ, ನಾ ಕಾನೇದೂಂಗಾ ಅಂತಾರೆ. ಹೇಳೋದು ಒಂದು, ಮಾಡೋದು ಒಂದು. ಆದರೆ, ಬಸವರಾಜ್ ಬೊಮ್ಮಾಯಿ ಮೇಲೆ ಕ್ರಮ ತೆಗೆದುಕೊಳ್ಳಲಿಲ್ಲ. ಇಂತಹ 40% ಸರ್ಕಾರ ಇರಬೇಕಾ? ಮೋದಿ ಅಚ್ಛೇ ದಿನ್ ಆಯೇಗಾ ಅಂತಾರಲ್ಲ. ನಿಮಗೇನಾದ್ರು ಅಚ್ಛೇ ದಿನ ಬಂತೇನ್ರಪ್ಪ? ಎಂದು ಜನರಿಗೆ ಸಿದ್ದರಾಮಯ್ಯ ಪ್ರಶ್ನಿಸಿದರು.
''ಚಲುವರಾಯಸ್ವಾಮಿ ಇಲ್ಲದಿದ್ದರೇ ಹೆಚ್ಡಿಕೆ ಸಿಎಂ ಆಗ್ತಿರಲಿಲ್ಲ. ಚಲುವರಾಯಸ್ವಾಮಿ ಒಂದು ದೊಡ್ಡ ತಪ್ಪು ಮಾಡ್ಬಿಟ್ಟ. ಆ ದಿನ ಚಲುವರಾಯಸ್ವಾಮಿ ಬಿಜೆಪಿ ಬೆಂಬಲ ಪಡೆದು ಹೆಚ್ಡಿಕೆಯನ್ನು ಸಿಎಂ ಮಾಡಿದ. ಆತನನ್ನು ಸಿಎಂ ಮಾಡಿ ದೊಡ್ಡ ತಪ್ಪು ಮಾಡ್ಬಿಟ್ಟೆ ಕಣಯ್ಯ. ಆ ಮೇಲೆ ಬಿಜೆಪಿ ಅಧಿಕಾರಕ್ಕೆ ಬರಬಾರದು ಅಂತಾ ಮೈತ್ರಿ ಸರ್ಕಾರ ಮಾಡಿದ್ವಿ. ಆಗ ವಿಧಾನಸೌಧದಲ್ಲಿ ಕುಳಿತು ಕೆಲಸ ಮಾಡಲಿಲ್ಲ. ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಕುಳಿತು ಹೆಚ್ಡಿಕೆ ಆಡಳಿತ ನಡೆಸಿದ್ರು ಎಂದು ಸಿದ್ದರಾಮಯ್ಯ ಹರಿಹಾಯ್ದರು.
ಜೆಡಿಎಸ್ ವಿರುದ್ಧ ವಾಗ್ದಾಳಿ: ಅಲ್ಲಿಗೆ ಜನಸಾಮಾನ್ಯರು, ಶಾಸಕರೂ ಕೂಡ ಹೋಗೋಕೆ ಆಗಲಿಲ್ಲ. ಬಿಗಿ ಭದ್ರತೆ ಭೇದಿಸಿ ಒಳಗೆ ಹೋಗೋಕೆ ಕಷ್ಟ ಇತ್ತು. ನಾನು ಹೇಳಿದೆ ಅಮೆರಿಕಕ್ಕೆ ಹೋಗ್ಬೇಡ ಕಣಯ್ಯ ಅಂತ ಹೇಳಿದ್ದೆ. ಮೂರು ದಿನ ಅಷ್ಟೇ ಬಂದ್ಬಿಡ್ತೀನಿ ಅಂತಾ ಹೋದ. 3 ದಿನದ ಬದಲು 9 ದಿನ ಅಮೆರಿಕಾದಲ್ಲೇ ಉಳಿದ. ಯಡಿಯೂರಪ್ಪ ಅಷ್ಟೊತ್ತಿಗೆ ಎಲ್ಲರಿಗೂ ಕೊಂಡ್ಕೊಳ್ಳೋಕೆ ಶುರು ಮಾಡ್ಬಿಟ್ಟ. ಹೆಚ್ಡಿಕೆ ಬೇಜವಾಬ್ದಾರಿತನದಿಂದ ಮೈತ್ರಿ ಸರ್ಕಾರ ಉರುಳಿತು, ಬಿಜೆಪಿ ಅಧಿಕಾರಕ್ಕೆ ಬಂತು. ಮೈತ್ರಿ ಸರ್ಕಾರ ಪತನಕ್ಕೆ ಕಾರಣ ಅವರ ಬೇಜವಾಬ್ದಾರಿತನ. ಜೆಡಿಎಸ್‌ನವರು ಅವಕಾಶವಾದಿಗಳು. ಅತಂತ್ರ ಸರ್ಕಾರ ಬರಲಿ ಅಂತಾ ಕಾಯುತ್ತಿದ್ದಾರೆ. ನಿತ್ಯವೂ ಹೋಮ, ಹವನ, ಪೂಜೆ ಮಾಡ್ತಾರೆ. ಅವಕಾಶ ಸಿಕ್ಕರೇ ಕಾಂಗ್ರೆಸ್ ಮತ್ತು ಬಿಜೆಪಿ ಜೊತೆಯಾದ್ರೂ ಹೋಗ್ತಾರೆ. ಈ ಬಾರಿ ನಮ್ಮ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತೆ ಎಂದು ಸಿದ್ದರಾಮಯ್ಯ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕೆಲವರು ಕಣ್ಣೀರು ಹಾಕಿ ನಾಟಕ ಮಾಡ್ತಾರೆ: ಚಲುವರಾಯಸ್ವಾಮಿಗೆ ನಾಯಕನಾಗುವ ಗುಣವಿದೆ. ತಾನೊಬ್ಬನೇ ಬೆಳೆಯಬೇಕು ಎಂಬ ಸ್ವಾರ್ಥ ಇಲ್ಲ. ಮತ್ತೊಬ್ಬರನ್ನು ಬೆಳೆಸಬೇಕು ಅಂದುಕೊಳ್ಳತ್ತಾರೆ. ಆದ್ರೆ 2018ರಲ್ಲಿ ಚಲುವರಾಯಸ್ವಾಮಿ ಅವರನ್ನ ಯಾಕೆ ಸೋಲಿಸಿದ್ರು ಅಂತ ಗೊತ್ತಾಗಲಿಲ್ಲ. ಬಹುಶಃ ಕಣ್ಣೀರು ಹಾಕಿದ್ದಕ್ಕೆ ಅವರನ್ನು ಸೋಲಿಸಿದ್ರು. ಕೆಲವರು ಕಣ್ಣೀರು ಹಾಕಿ ನಾಟಕ ಮಾಡ್ತಾರೆ ಅಂತ ಪರೋಕ್ಷವಾಗಿ ಕುಮಾರಸ್ವಾಮಿ ಅವರು ವಿರುದ್ಧ ಕಿಡಿಕಾರಿದರು. ಕಾಂಗ್ರೆಸ್ ಪಕ್ಷ ಈ ಬಾರಿ ನೂರಕ್ಕೆ ನೂರುರಷ್ಟು ಅಧಿಕಾರಕ್ಕೆ ಬರುತ್ತೆ. ಚಲುವರಾಯಸ್ವಾಮಿ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗುತ್ತಾರೆ ಅವರಿಗೆ ಮತ ಹಾಕಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಇದನ್ನೂ ಓದಿ: ದಲಿತ ನಾಯಕ ಖರ್ಗೆ ಸಾವು ಬಯಸಿದ ನಿಮ್ಮ ಶಾಸಕನ ವಿರುದ್ಧ ಕ್ರಮವಿಲ್ಲವೇ?: ಮೋದಿಗೆ ಸುರ್ಜೇವಾಲಾ ಪ್ರಶ್ನೆ